ಪಕ್ಷ ವಿರೋಧಿ ಚಟುವಟಿಕೆ ನಡೆದಿಲ್ಲ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 27
ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿಲ್ಲ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಮೈಸೂರು ನಗರ ಜಾತ್ಯತೀತ ಜನತಾದಳದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಅಭ್ಯರ್ಥಿಯ ಸೋಲು, ಗೆಲುವಿಗೆ ಮತದಾರರ ತೀರ್ಪು ಅಂತಿಮ. ಇದಕ್ಕೆ ಎಲ್ಲರೂ ಗೌರವ ನೀಡಬೇಕು. ಬೇರೆ ಬೇರೆ ಕಾರಣಗಳಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಸೋತಿರಬಹುದು. ಆ ಸೋಲಿಗೆ ಕಾರಣವೇನು ಎಂಬುದನ್ನು ಕಂಡುಕೊಳ್ಳಬೇಕಿದೆ. ಅದನ್ನು ಬಿಟ್ಟು ನನ್ನ ಸೋಲಿಗೆ ಪಕ್ಷದ ಕಾರ್ಯಕರ್ತರು ಕಾರಣವೆಂದು ಹೇಳಿ ಅಪಮಾನ ಮಾಡಿರುವುದು ಸರಿಯಲ್ಲ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಅಂತಿಮ ಸಮಯದಲ್ಲಿ ಚಂದ್ರಶೇಖರಯ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದರು. ಅದನ್ನು ಒಪ್ಪಿಕೊಂಡು ಪಕ್ಷದ ಪರವಾಗಿ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಅಪಾದನೆ ಮಾಡಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ ಎಂದರು.
ಕ್ಷಮೆಗೆ ಆಗ್ರಹ: ಚಂದ್ರಶೇಖರಯ್ಯ ಅವರು ಫಲಿತಾಂಶ ಬಂದ ಮೇಲೆ ಯಾವುದೇ ಮುಖಂಡರನ್ನು ಭೇಟಿ ಮಾಡಿಲ್ಲ. ಆದರೆ ಟಿ.ವಿ. ವಾಹಿನಿಯ ಸಂದರ್ಶನಮೊಂದರಲ್ಲಿ ಮಾತನಾಡಿ, ಪಕ್ಷದ ನಗರ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಹಣ ಪಡೆದು ಬೇರೆ ಪಕ್ಷದ ಪರ ಕೆಲಸ ಮಾಡಿದ್ದು ನನ್ನ ಸೋಲಿಗೆ ಕಾರಣನವೆಂದು ಹೇಳಿರುವುದು ಖಂಡನೀಯ. ಇದಕ್ಕಾಗಿ ಅವರು ಕ್ಷಮ ಯಾಚಿಸಬೇಕು ಎಂದರು.
ಆಕ್ರೋಶ: ವಿಧಾನ ಪರಿಷತ್ ಸದಸ್ಯ ಸಂದೇಶ್ನಾಗರಾಜ್ ಮಾತನಾಡಿ, ಎಚ್.ಡಿ ದೇವೇಗೌಡರು ಬಲವಂತಾಗಿ ನನ್ನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿದರು ಎಂದು ಚಂದ್ರಶೇಖರಯ್ಯ ಹೇಳಿಕೊಂಡಿದ್ದಾರೆ. ಇದು ಸುಳ್ಳು. ಅವರು ಮಂಡ್ಯ ಲೋಕಸಭೆಗೆ ಟಿಕೆಟ್ ಕೇಳಿದ್ದರು. ಈಗ ಸೋತ ನಂತರ ನೂರಾರು ಮೀರ್ಸಾಧಕ್ರಿಂದ ಸೋಲಬೇಕಾಯಿತು ಎಂದು ಹೇಳಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಪ್ಪು ಬಾವುಟ ಪ್ರದರ್ಶನ ಬೆದರಿಕೆ: ಸಭೆಯಲ್ಲಿ ಮಾತನಾಡಿದ ಮುಖಂಡರು ಹಾಗೂ ಕಾರ್ಯಕರ್ತರು ಚಂದ್ರಶೇಖರಯ್ಯ ಅವರ ಅವಹೇಳನಕಾರಿ ಮಾತುಗಳಿಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವುದಾಗಿ ಕಿಡಿ ಕಾರಿದರು. ನಂತರ ಸಭೆಯ ತೀರ್ಮಾನವನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲು ನಿರ್ಧರಿಸಲಾಯಿತು.
ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಸಂದೇಶ್ ಸ್ವಾಮಿ, ಉಪಮೇಯರ್ ವಿ. ಶೈಲೇಂದ್ರ, ನಗರ ಪಾಲಿಕೆ ಸದಸ್ಯರಾದ ಕೆ.ಟಿ ಚೆಲುವೇಗೌಡ, ಆರ್. ಲಿಂಗಪ್ಪ, ಕೆ.ವಿ ಮಲ್ಲೇಶ್, ಎಂ.ಜೆ. ರವಿಕುಮಾರ್, ಮಹದೇವಪ್ಪ, ಶಿವಣ್ಣ, ರಮೇಶ್ (ರಮಣಿ), ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ವಕ್ತಾರ ಎಸ್.ಬಿ.ಎಂ. ಮಂಜು, ಕಾರ್ಯಾಧ್ಯಕ್ಷರಾದ ವೇಣು ಗೋಪಾಲ್, ಪಿ. ಮಂಜುನಾಥ್, ಉಪಾಧ್ಯಕ್ಷ ಬೋರೇಗೌಡ, ಗೋಪಾಲ ಚಾರ್, ಪ್ರಧಾನ ಕಾರ್ಯದರ್ಶಿ ಆರ್. ಮುದ್ದುರಾಜು, ನಜರಬಾದ್ ಬಾಬು, ಪ್ರಭುಸ್ವಾಮಿ, ಟಿ. ಪರಮೇಶ್, ಎಂ. ಬಸವರಾಜು, ಭಾಗ್ಯ, ಲಕ್ಷ್ಮೀ ಇದ್ದರು.