ಸಸಿ ನೆಟ್ಟು ಸಂಭ್ರಮಿಸಿದ ಬಿಜೆಪಿ
ಮೈಸೂರು: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಸಿ ನೆಡುವ ಮೂಲಕ ಮಂಗಳವಾರ ಸಂಭ್ರಮಿಸಿದರು.
ನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮ.ವಿ. ರಾಮಪ್ರಸಾದ್ ನೇತೃತ್ವದಲ್ಲಿ ಚಾಮುಂಡಿಪುರಂನ ವೃತ್ತದಲ್ಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮ.ವಿ. ರಾಮಪ್ರಸಾದ್, ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೆರಳಾಗಿ ರಕ್ಷಣೆ ನೀಡುತ್ತಾರೆ ಎಂಬ ಜನರ ಆಶಯದಂತೆ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಸಂಭ್ರಮ ಆಚರಿಸಲಾಗುತ್ತಿದೆ. ವಿದ್ಯಾರಣ್ಯಪುರಂ ಹಾಗೂ ಚಾಮುಂಡಿಪುರಂ ಸುತ್ತಮುತ್ತ ಸುಮಾರು 500 ಸಸಿಗಳನ್ನು ನೆಡುವ ಉದ್ದೇಶವಿದ್ದು, ನಾಳೆಯು ಸಹ ಈ ಕಾರ್ಯಕ್ರಮ ಮುಂದುವರಿಯಲಿದೆ ಎಂದರು. ನಗರಾಧ್ಯಕ್ಷ ಇ. ಮಾರುತಿ ರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪಗೌಡ, ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ, ಜೋಗಿ ಮಂಜು, ಸಂದೀಪ್ ಇದ್ದರು.