ಶಿಷ್ಯ ವೇತನ ಅರ್ಜಿ ಅಸ್ವೀಕಾರ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಔರಾದ್, ಏ. 1
ಕಾಲೇಜ್ ವಿದ್ಯಾರ್ಥಿಗಳ ಶಿಷ್ಯ ವೇತನ ಅರ್ಜಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಅಧಿಕಾರಿಗಳ ವಿಳಂಬ ಧೋರಣೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಅಶೋಕ ಶೆಂಬೆಳ್ಳಿ ನೇತೃತ್ವದಲ್ಲಿ ಠಾಣಾ ಕುಶನೂರ ಪಾಲಿಟೆಕ್ನಿಕ್ ಕಾಲೇಜ್ನ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಕಾಲೇಜ್ ವಿದ್ಯಾರ್ಥಿಗಳು ಸೊಮುವಾರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬೀಗ ಜಡಿದು ಕಚೇರಿ ಎದುರು ಎರಡು ಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತು ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಸಲ್ಲದ ನೆಪ: ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಪ್ರಮುಖರು ಕಳೆದ ಎರಡು ತಿಂಗಳಿನಿಂದ ಶಿಷ್ಯ ವೇತನಕ್ಕಾಗಿ ತಾಲೂಕಿನ ಠಾಣಾ ಕುಶನೂರ ಕಾಲೇಜ್ ವಿದ್ಯಾರ್ಥಿಗಳು ಅಲೆದಾಡುತಿದ್ದು ಅಧಿಕಾರಿಗಳು ಅರ್ಜಿ ಸ್ವೀಕರಿಸಲು ಇಲ್ಲ ಸಲ್ಲದ ನೆಪಮೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಶಿಷ್ಯ ವೇತನದ ಅರ್ಜಿಗಳು ಆನ್ಲೈನ್ ಮುಖಾಂತರ ಸ್ವೀಕರಿಸಲಾಗುತ್ತದೆ. ಆದರೂ ಅಧಿಕಾರಿಗಳು ಕಚೇರಿಯಲ್ಲಿ ಆನ್ಲೈನ್ ವ್ಯವಸ್ಥೆ ಇಲ್ಲ ಎನ್ನುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳನ್ನು ಶಿಷ್ಯ ವೇತನದಿಂದ ವಂಚಿತರನ್ನಾಗಿ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವ್ಯವಸ್ಥೆ: ಈ ಸಮಸ್ಯೆ ಕಾಲೇಜ್ ವಿದ್ಯಾರ್ಥಿಗಳಲ್ಲದೇ ಇಡೀ ತಾಲೂಕಿನ ವಿದ್ಯಾರ್ಥಿಗಳ ಸಮಸ್ಯೆಯಾಗಿದೆ. ಕಚೇರಿಯಲ್ಲಿ ಆನ್ಲೈನ್ ವ್ಯವಸ್ಥೆ ಇಲ್ಲ ಎಂದು ಹೇಳಿ ಇನ್ನೊಂದೆಡೆ ಖಾಸಗಿ ಇಂಟರ್ನೆಟ್ನಲ್ಲಿ ಅರ್ಜಿ ಸ್ವಿಕರಿಸುತ್ತಿದ್ದು, ಅಲ್ಲಿ ವಿದ್ಯಾರ್ಥಿಗಳು ಪ್ರತಿ ಅರ್ಜಿಗೆ ರು. 50 ನೀಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾದರೆ ಬಡ ವಿದ್ಯಾರ್ಥಿಗಳ ಪಾಡೇನು ಎಂದು ಪ್ರಶ್ನಿಸಿದರು.
ಕಚೇರಿಯಲ್ಲಿಯೆ ಶಿಷ್ಯ ವೇತನಗಳ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡುವ ಬಗ್ಗೆ ಲಿಖಿತ ರೂಪದಲ್ಲಿ ಬರೆದುಕೊಡುವಂತೆ ಹಠ ಹಿಡಿದ ಕಾರ್ಯಕರ್ತರು ಸ್ಥಳಕ್ಕೆ ಸಮಾಜ ಕಲ್ಯಾಣ ಅಧಿಕಾರಿ ಬರುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳಿಂದ ಅಧಿಕಾರಿ ತರಾಟೆಗೆ: ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಅಧಿಕಾರಿ ವಿಠ್ಠಲ್ ತೆಲಂಗ್ರನ್ನು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ಶಿಷ್ಯ ವೇತನಗಳ ಅರ್ಜಿಗಳು ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕಲು ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಮಯಕ್ಕೆ ಸರಿಯಾಗಿ ಅರ್ಜಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.
ಏ. 8ರ ಒಳಗಾಗಿ ಸಂಬಂಧಪಟ್ಟ ಕಾಲೇಜ್ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶಿಷ್ಯ ವೇತಗಳ ಅರ್ಜಿಗಳನ್ನು ಸ್ವೀಕರಿಸಲಾಗುವುದೆಂದು ಲಿಖಿತ ರೂಪದಲ್ಲಿ ನೀಡಿದಾಗ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ಪರಿಷತ್ ತಾಲೂಕು ಕಾರ್ಯದರ್ಶಿ ಅರುಣ ಪಾಟೀಲ್, ಪ್ರಮುಖರಾದ ಅಂಬಾದಾಸ ನೆಳಗೆ, ರವಿ ಸ್ವಾಮಿ, ಸಿದ್ದು ಪಾಟೀಲ್ ಸೇರಿದಂತೆ ಠಾಣಾ ಕುಶನೂರ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.