ಜಾಹೀರಾತು ಅನುಮೋದನೆ: ಕಾಸಿಗೆ ಸುದ್ದಿ ಪರಿಶೀಲನಾ ಸಮಿತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.2
ಚುನಾವಣೆ ವೇಳೆ ವಿವಿಧ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿವಿಧ ಮಾಧ್ಯಮಗಳಲ್ಲಿ ನೀಡುವ ಜಾಹೀರಾತು ಪರಿಶೀಲನೆ ಹಾಗೂ ಕಾಸಿಗಾಗಿ ಪ್ರಕಟವಾಗುವ ಹಾಗೂ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾಯಿರಿಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದ ಸಮಿತಿ ರಚಿಸಲು ಚುನಾವಣಾ ಆಯೋಗ ಸೂಚಿಸಿದೆ.
ಈ ಸಮಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಉಪವಿಭಾಗ ದಂಡಾಧಿಕಾರಿ ಮಟ್ಟದ ಒಬ್ಬ ಅಧಿಕಾರಿ, ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಅಧಿಕಾರಿ, ಭಾರತೀಯ ಪತ್ರಿಕಾ ಮಂಡಳಿ ಸೂಚಿಸುವ ಪತ್ರಕರ್ತ ಇಲ್ಲವೇ ಸ್ವಾತಂತ್ರ್ಯ ನಾಗರಿಕ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಇರಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪರಿಶೀಲನೆ: ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಉಪ ವಿಭಾಗ ಮಟ್ಟದ ಅಧಿಕಾರಿಗಳೇ ಪರಿಶೀಲಿಸಿ ಅನುಮೋದನೆ ನೀಡಬಹುದಾಗಿದೆ. ಆದರೆ ಕಾಸಿಗಾಗಿ ಸುದ್ದಿ ಪ್ರಕಟವಾಗುವ ಸಂದರ್ಭದಲ್ಲಿ ಸಮಿತಿಯ ಪೂರ್ಣ ಸದಸ್ಯರು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದೆ.
ಸಮಿತಿಯು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೇಬಲ್ ನೆಟ್ವರ್ಕ್, ಇಂಟರ್ನೆಟ್, ಮೊಬೈಲ್ ನೆಟ್ ವರ್ಕ್ಗಳು ಸೇರಿ ಎಲ್ಲ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕಾಸಿಗಾಗಿ ಸುದ್ದಿ ಎಂದು ಅನುಮಾನಿಸಲಾದ ಸುದ್ದಿಗಳನ್ನು ಪರಿಶೀಲಿಸಬೇಕಾಗಿದೆ ಹಾಗೂ ಸಂಬಂಧಿಸಿದವರಿಗೆ ನೋಟಿಸ್ ನೀಡಿ ವಿವರಣೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದೆ.
ಜಾಹೀರಾತು ದರ ಅಭ್ಯರ್ಥಿ ಲೆಕ್ಕಕ್ಕೆ..: ಕಾಸಿಗಾಗಿ ಸುದ್ದಿ ಪ್ರಕಟವಾದ ಸಂದರ್ಭದಲ್ಲಿ ಅಭ್ಯರ್ಥಿಯು ಹಣ ಪಾವತಿಸಿರಲಿ ಅಥವಾ ಇಲ್ಲದಿರಲಿ, ವಾರ್ತಾ ಇಲಾಖೆ ನಿಗದಿಪಡಿಸಿದ ಜಾಹೀರಾತು ದರ ಇಲ್ಲವೇ ಆಯಾ ಮಾಧ್ಯಮಗಳ ವಾಸ್ತವ ಜಾಹೀರಾತು ದರವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿರುತ್ತದೆ ಎಂದು ತಿಳಿಸಿದೆ.