ಮತದಾರರ ಪಟ್ಟಿ: 7ರೊಳಗೆ ಹೆಸರು ನೋಂದಣಿಗೆ ಸೂಚನೆ
ರಾಯಚೂರು: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವವರು ಹಾಗೂ 18 ವರ್ಷ ವಯಸ್ಸು ಪೂರೈಸಿದವರು ಏ. 7ರೊಳಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಲು ಜಿಲ್ಲಾಡಳಿತ ಸೂಚಿಸಿದೆ.
ಅರ್ಜಿ ನಮೂನೆ- 6ರಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಬಣ್ಣದ ಭಾವಚಿತ್ರ, ವಯಸ್ಸಿನ ಮತ್ತು ವಾಸಸ್ಥಳದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಸೂಚಿಸಿದ್ದು, ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ಮತದಾರರು ತಮ್ಮ ಹೆಸರುಗಳ ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರಿಲ್ಲದವರು ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರ ಕಚೇರಿಗಳಲ್ಲಿ ಹಾಗೂ ಚುನಾವಣಾ ಶಾಖೆಯಲ್ಲಿ ಪರಿಶೀಲಿಸಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಬಹುದು ಎಂದು ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಲು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿ ಪರಿಶೀಲಿಸಿ ತಿದ್ದುಪಡಿಗಳೇನಾದರೂ ಇದ್ದಲ್ಲಿ ಅರ್ಜಿ ನಮೂನೆ 8ರಲ್ಲಿ, ವರ್ಗಾವಣೆಗಾಗಿ ನಮೂನೆ '8ಎ'ರಲ್ಲಿ ಹಾಗೂ ಹಾಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.