ಸರ್ಕಾರಿ ಯೋಜನೆ ಸ್ವಂತಕ್ಕೆ ಬಳಕೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.2
ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಅನೇಕ ಸರ್ಕಾರಿ ಯೋಜನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಾಧನೆಗೈದಿದ್ದಾರೆ ಎಂದು ಜೆಡಿಎಸ್ ತಾಲೂಕು ವಕ್ತಾರ ಬಸವರಾಜ ನಾಡಗೌಡ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಮಂಗಳವಾರ ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನಾದ್ಯಂತ ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ಅರೆಬರೆ ಮಾಡಿ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ತಮ್ಮ ಸಂಬಂಧಿ ಗುತ್ತೇದಾರರ ಜೇಬು ತುಂಬಿಸುವ ಕಾರ್ಯ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಯೋಜನೆಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಬೇಕಿದ್ದ ಕೆರೆಯನ್ನು ತಿಮ್ಮಾಪುರದ ತಮ್ಮ ಹೊಲದಲ್ಲಿ ಮಾಡಿಕೊಂಡು ಜನರಿಗೆ ಮೋಸ ಮಾಡಿದ್ದಾರೆ ಎಂದರು.
ಎಲ್ಲವೂ ಸ್ವಂತಕ್ಕಾಗಿ..: ಯಾರದೋ ಯೋಜನೆ, ಯಾರದೋ ಭೂಮಿ ಆದರೂ ಬಾದರ್ಲಿಯವರು ತಮ್ಮ ಅಧಿಕಾರಾವಧಿಯಲ್ಲಿ ಅರಗಿನಮರ ಕ್ಯಾಂಪ್ ಬಳಿ ತಮ್ಮ ಹಿರಿಯ ಸಹೋದರನ ಹೆಸರಲ್ಲಿ 'ಬಸನಗೌಡ ಬಾದರ್ಲಿ ನಗರ' ಮಾಡಿಸಿದ್ದು, ಸಿಪಿಎಸ್ ಸರ್ಕಾರಿ ಶಾಲೆ ಸೇರಿದಂತೆ ಬೃಹತ್ ಆಟದ ಮೈದಾನವನ್ನು ತಮ್ಮದೆಂದು ನ್ಯಾಯಾಲಯದಲ್ಲಿ ವಾದಿಸುತ್ತಿರುವುದು, ಅಕ್ರಮ ಕಟ್ಟಡಗಳ ತೆರೆವುಗೊಳಿಸುವಾಗ ತಮ್ಮ ಕಟ್ಟಡ ಕೆಡವಬಾರದೆಂದು ಹಿಟಾಚಿ ವಾಹನದ ಪುಟ್ಟಿಯಲ್ಲಿ ಕುಳಿತದ್ದು ಅವರ ಪ್ರಮುಖ ಸಾಧನೆಗಳಾಗಿವೆ ಎಂದು ಲೇವಡಿ ಮಾಡಿದರು.
ಅಲ್ಪಸಂಖ್ಯಾತರ ವಿರೋಧಿಯಾಗಿರುವ ಹಂಪನಗೌಡರು, ನಗರಸಭೆಗೆ 4 ಬಾರಿ ಆಯ್ಕೆಯಾಗಿರುವ ಜಾಫರ ಜಾಗೀರದಾರರನ್ನು ಅಧ್ಯಕ್ಷರನ್ನಾಗಿ ಮಾಡುವುದಿಲ್ಲ. ಆದರೂ ಜಾಫರ್ ಹಗಲುಗನನು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಪಪ್ರಚಾರ: ವೀರಶೈವ ಸಮಾಜದ ತಾಲೂಕಾಧ್ಯಕ್ಷ ಅಶೋಕ ಗದ್ರಟಗಿ ಮಾತನಾಡಿ, ಸುಮಾರು 20 ವರ್ಷ ಆಡಳಿತ ನಡೆಸಿದ ವಿರೂಪಾಕ್ಷಪ್ಪ ಅವರಾಗಲಿ, ಬಾದರ್ಲಿಯವರಾಗಲಿ ಬಪ್ಪೂರ ರಸ್ತೆಯ ಚರಂಡಿಯ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ನಾಡಗೌಡರು ಬೃಹತ್ ಚರಂಡಿ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ನಾಡಗೌಡರಿಂದ ಅಧಿಕಾರ ಪಡೆದವರೀಗ ಬೇರೆ ಪಕ್ಷಗಳಿಗೆ ಹೋಗಿ ಅಪಪ್ರಚಾರ ಮಾಡುತ್ತಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ತಾಲೂಕು ಕಾರ್ಯದರ್ಶಿ ಸಾಯಿರಾಮಕೃಷ್ಣ, ಕೆ.ಭೀಮನಗೌಡ ವಕೀಲ, ಮುಖಂಡರಾದ ಖಾಜಿವಲಿ, ಹರ್ಷದ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಜಿಲಾನಿಪಾಷಾ ಜಾಗೀರದಾರ, ನಗರಸಭೆ ಸದಸ್ಯರಾದ ಎಂ.ಮೈಹಿಬೂಬ, ಶರಣಬಸವರಾಜ, ಸಣ್ಣ ವೀರಭದ್ರಪ್ಪ, ಮಾಜಿ ಸದಸ್ಯ ಸುಭಾಸ ಫ್ರಾಂಕ್ಲಿನ್, ಧರ್ಮನಗೌಡ ಮಲ್ಕಾಪುರ, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ವೆಂಕೋಬ ಜಿನ್ನದ, ಮರಿಯಪ್ಪ ಬಂಡಿ, ಗದ್ದೆಪ್ಪ ಭಾಗವಹಿಸಿದ್ದರು. ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಸುಮಿತ್ ತಡಕಲ್ ನಿರೂಪಿಸಿದರು.