ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೊಸ ವದನದೆಡೆಗೆ ಕಮಲದ ತುಡಿತ

Lingaraj Badiger
Updated On : 3 Apr 2013, 11:23 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.2
ಜಿಲ್ಲೆಯಲ್ಲಿ ಕಳೆದ ಚುನಾವಣೆಯ ನಂತರ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳುವುದೆಂಬ ಕಾರ್ಯಕರ್ತರ ನಂಬಿಕೆಯನ್ನು ಆ ಪಕ್ಷದ ನಾಯಕರೇ ಹುಸಿಗೊಳಿಸಿದ್ದಾರೆ. ಹೀಗಾಗಿ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಆದರೆ ರಾಯಚೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ ಏರ್ಪಟಿದ್ದು, ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ರಾಯಚೂರು ನಗರ ವಿಧಾನಸಭೆ ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ವಿರೋಧಿ ಅಲೆಯನ್ನು ಬಳಸಿಕೊಂಡು ಕಣಕ್ಕೆ ಹೊಸಬರನ್ನು ಇಳಿಸುವ ಮೂಲಕ ಸಾಮಾನ್ಯರಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಗೆಲವು ಸಾಧಿಸಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪಾಪಾರೆಡ್ಡಿ- ಜೋಷಿ ಪೈಪೋಟಿ: ಜಿಲ್ಲೆಯಲ್ಲಿ ಸಿಂಧನೂರು ಹಾಗೂ ರಾಯಚೂರು ನಗರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳೂ ಕಳೆದ ಚುನಾವಣೆಯಿಂದ ಮೀಸಲು ಕ್ಷೇತ್ರಗಳಾಗಿವೆ. ಸಾಮಾನ್ಯರಿಗೆ ಮೀಸಲಾಗಿರುವ ಸಿಂಧನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಆದರೆ ರಾಯಚೂರು ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ತ್ರಿವಿಕ್ರಮ್ ಜೋಷಿ ಅವರ ಮಧ್ಯೆಯೇ ಟಿಕೆಟ್‌ಗೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಪಕ್ಷ ಹೊಸಬರಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಹಾಗೊಂದು ವೇಳೆ ಪಕ್ಷವು ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದ್ದಲ್ಲಿ ಟಿಕೆಟ್ ತ್ರಿವಿಕ್ರಮ್ ಜೋಷಿ ಅವರ ಪಾಲಾಗಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆದಿದೆ.
ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿರುವ ತ್ರಿವಿಕ್ರಮ್ ಜೋಷಿ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಶಾಸಕ ಪಾಪಾರೆಡ್ಡಿ ಅವರು ಈಗಾಗಲೇ ಪಕ್ಷದ ಪ್ರಮುಖರ ಮೇಲೆ ಪ್ರಭಾವ ಬೀರಿದ್ದಾರೆ ಎಂದೂ ಗೊತ್ತಾಗಿದ್ದು, ಟಿಕೆಟ್‌ಗೆ ಭಾರೀ ಪೈಪೋಟಿಯಿದೆ.
ಬಿಜೆಪಿ ಜಿಲ್ಲಾಧ್ಯಕ್ಷರೊಂದಿಗೆ ಸಮಾಲೋಚನೆ: ಈ ಮಧ್ಯೆ ಕಳೆದ ಎರಡು ದಿನಗಳ ಹಿಂದಷ್ಟೇ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರೊಂದಿಗೆ ಪಕ್ಷದ ರಾಜ್ಯ ಮಟ್ಟದ ನಾಯಕರು ಸಮಾಲೋಚಿಸಿದ್ದು, ಅವರನ್ನೇ ಸ್ಪರ್ಧೆಗಿಳಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಆ ವೇಳೆ ಅವರು ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆಂದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಹೀಗಾಗಿ, ಸದ್ಯ ರಾಯಚೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಹಾಗೂ ಪಕ್ಷದ ಪ್ರಮುಖ ನಾಯಕ ತ್ರಿವಿಕ್ರಮ್ ಜೋಷಿ ಅವರ ಮಧ್ಯೆಯೇ ಟಿಕೆಟ್‌ಗೆ ಸ್ಪರ್ಧೆ ಏರ್ಪಟ್ಟಿದ್ದು, ವರಿಷ್ಠರು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತ್ರಿವಿಕ್ರಮ್ ಜೋಷಿ ಅವರ ಪರ ಒಲವು ತೋರಿದ್ದಾರೆಂದು ಮೂಲಗಳು ಹೇಳಿವೆ.

ಯಾಪಲಪರ್ವಿಗೆ ತಾಲೂಕಾಧ್ಯಕ್ಷ ಪಟ್ಟ?
ಸಿಂಧನೂರು: ಭಾರತೀಯ ಜನತಾ ಪಕ್ಷದ ತಾಲೂಕು ಮುಖಂಡ ದೇವೇಂದ್ರಪ್ಪ ಯಾಪಲಪರ್ವಿ ಪಕ್ಷದ ತಾಲೂಕು ಅಧ್ಯಕ್ಷರಾಗುವ ಸಂಭವವಿದೆ ಎಂದು ಬಿಜೆಪಿ ಉನ್ನತ ಮೂಲಗಳು ದೃಢಪಡಿಸಿವೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಜನಸಂಪರ್ಕವನ್ನು ಹೊಂದಿದ್ದಾರೆ. ಕೊಲ್ಲಾ ಶೇಷಗಿರಿರಾವ್ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾದರೆ ದೇವೇಂದ್ರಪ್ಪ ಅವರ ನೇಮಕವೂ ಖಚಿತವಾಗುತ್ತದೆ. ಇದರಿಂದ ನಾಯಕ ಸಮಾಜದವರ ಮೇಲೆ ಇವರ ಪ್ರಭಾವ ಹೆಚ್ಚಾಗಿ ಅವು ಮತಗಳಾಗಿ ಪರಿವರ್ತನೆಯಾಗಬಹುದೆಂಬ ಲೆಕ್ಕಾಚಾರ ಬಿಜೆಪಿಯ ಜಿಲ್ಲಾ ಮುಖಂಡರಿಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement