ಎಗ್ಗಿಲ್ಲದೆ ಸಾಗಿದೆ ಗ್ರಾನೈಟ್ ಅಕ್ರಮ ಗಣಿಗಾರಿಕೆ
ಕನ್ನಡಪ್ರಭ ವಾರ್ತೆ, ಮುದಗಲ್, ಏ.3
ಪಟ್ಟಣಕ್ಕೆ ಸಮೀಪದ ಮಾಕಾಪುರಕ್ಕೆ ಹೊಂದಿಕೊಂಡೇ ಅಕ್ರಮ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದವರಂತೆ ನಿರ್ಲಿಪ್ತರಾಗಿದ್ದಾರೆ.
ಸುಮಾರು 1,500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಬೆಕ್ಕಿನ ಕಣ್ಣು ಬಣ್ಣದ ಕಲ್ಲು ಶಿಲೆ ವಿದೇಶಿ ವ್ಯಾಪಾರಿಗಳನ್ನು ಸೆಳೆಯುವುದರ ಜೊತೆಗೆ ಸ್ವದೇಶಿಯರಿಗೂ ಅಚ್ಚುಮೆಚ್ಚು. ಇಲ್ಲಿರುವ ಕಲ್ಲು ಉದ್ಯಮಿಗಳಿಗೆ ಚಿನ್ನದ ಗಣಿ ಇದ್ದ ಹಾಗೆ. ಸರಳವಾಗಿ ಹೆಚ್ಚು ಬಂಡವಾಳ ಹಾಕದೆ ಕೋಟಿ ಕೋಟಿ ಹಣ ಗಳಿಸುವ ಗಣಿ ಇದಾಗಿದೆ.
ರಾತ್ರೋರಾತ್ರಿ ಸಾಗಣೆ: ಗಣಿಗಾರಿಕೆ ಪರವಾನಗಿ ಇಲ್ಲದೆ 8ಕ್ಕೂ ಹೆಚ್ಚು ಅಕ್ರಮ ಗಣಿಗಳು ರಾಜಾರೋಷವಾಗಿ ತಲೆ ಎತ್ತಿವೆ. ಇಲ್ಲಿಂದ ಬೆಲೆ ಬಾಳುವ ಕಲ್ಲುನ್ನು ಸಾಗಿಸಲು ಉದ್ಯಮಿಗಳಿಗೆ ಯಾವುದೇ ಭಯವಿಲ್ಲ. ಹಗಲಿನಲ್ಲಿ ಕಲ್ಲು ಶಿಲೆಗಳನ್ನು ತೆಗೆದ ರಾತ್ರೋರಾತ್ರಿ ಜಿಲ್ಲೆಯ ಗಡಿ ದಾಟಿಸಲಾಗುತ್ತದೆ. ಇಲ್ಲಿನ ಪ್ರತಿ ಮೀಟರ್ ಕಲ್ಲಿಗೆ 20ರಿಂದ 30 ಸಾವಿರದವರೆಗೆ ಬೆಲೆ ಇದೆ.
ಕೋಟ್ಯಂತರ ರು. ವಂಚನೆ: ಗ್ರಾನೈಟ್ ಎಂದಾಕ್ಷಣ ಮುದಗಲ್, ಮಾಕಾಪುರ, ಆದಾಪುರ, ಗ್ರಾಮಗಳ ಹೆಸರು ಕೇಳಿ ಬರುತ್ತವೆ. ಅಕ್ರಮ ಗಣಿಗಾರಿಕೆ ಎಂದಾಕ್ಷಣ ಮಾಕಾಪುರದತ್ತ ಎಲ್ಲರ ಕಣ್ಣು ಬೀಳುತ್ತವೆ. ಇಲ್ಲಿ ಗಣಿಗಾರಿಕೆ ನಡೆಸುವವರೆಲ್ಲರೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಪಟ್ಟಣದ ಉದ್ಯಮಿಗಳು. ಲಕ್ಷ ಬಂಡವಾಳ ಹಾಕಿ ಕೋಟಿ ಕೋಟಿ ಲಾಭ ಪಡೆಯುತ್ತಿದ್ದಾರೆ.
ಕಳೆದ 15 ವರ್ಷಗಳಿಂದ ಈ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸುವ ಮೂಲಕ, ರಾಜ್ಯಕ್ಕೆ ಕೋಟ್ಯಂತರ ರು. ರಾಜ್ಯಧನ ವಂಚಿಸುತ್ತಾ ಬಂದಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡೇ ಗಣಿಗಾರಿಕೆ ನಡೆಸುತ್ತಿದ್ದರಿಂದ ಗ್ರಾಮದ ಅನೇಕ ಮನೆಗಳು ಉರುಳಿ ಬೀಳುತ್ತಿವೆ. ಅಕ್ರಮ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಇಲ್ಲಿನ ಜನರು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ನಿಯಮಗಳಿಗೆ ಬೆಲೆಯೇ ಇಲ್ಲ: ಯಾವುದೇ ಗಣಿಗಾರಿಕೆ ನಡೆಸಬೇಕಾದರೆ, ಗ್ರಾಮ ಅಥವಾ ಜನ ವಸತಿಗಳಿಂದ 1,600 ಮೀಟರ್ ಅಂತರವಿರಬೇಕು ಎನ್ನುವ ನಿಯಮಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾತ್ರಿ ವೇಳೆ ಸ್ಫೋಟಿಸುತ್ತಿದ್ದರಿಂದ ಮನೆಯಲ್ಲಿ ಮಲಗಿದವರಿಗೆ ಭೂಕಂಪ ಆದ ಅನುಭವವಾಗುತ್ತದೆ.
ಎಲ್ಲಿ ಮನೆಗಳು ತಮ್ಮ ಮೇಲೆ ಬೀಳುತ್ತವೆಯೋ ಎಂದು ಗ್ರಾಮದ ಹಿರಿಯ ನಾಗರಿಕ ವಂದಾಲಪ್ಪ ತನ್ನ ಅನುಭವವನ್ನು ಪತ್ರಿಕೆಯ ಮುಂದೆ ತೆರೆದಿಟ್ಟ. ಮಾಕಾಪುರದ ಅನೇಕ ಮನೆಗಳ ಬೆನ್ನಿಗೆ ಹೊಂದಿಕೊಂಡೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೂ ತಾಲೂಕಿನ ತಹಸೀಲ್ದಾರರಾಗಲೀ, ಜಿಲ್ಲಾಧಿಕಾರಿಗಳಾಗಲೀ, ಪೊಲೀಸರಾಗಲೀ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲೀ ಇದನ್ನು ತಡೆಗಟ್ಟಲು ಮುಂದೆ ಬಂದಿಲ್ಲ.