ಕಾಂಗ್ರೆಸ್‌ಗೆ ಹಲವರು ಸೇರ್ಪಡೆ
ದೇವದುರ್ಗ: ತಾಲೂಕಿನ ಕೆ. ಇರಬಗೇರಾ ಗ್ರಾಮದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಗ್ರಾಪಂ ಬಿಜೆಪಿಯ ಹಾಲಿ ಮತ್ತು ಮಾಜಿ ಸದಸ್ಯರು ಕಾಂಗ್ರೆಸ್ ಸೇರಿದರು.
ಸಮಾರಂಭದಲ್ಲಿ ಮಾತನಾಡಿದ ತಾಲೂಕು ಕಾಂಗ್ರೆಸ್ ಯುವ ಮುಖಂಡ ಬಿ.ವಿ.ನಾಯಕ ಮಾತನಾಡಿ, ಶಾಸಕ ಕೆ. ಶಿವನಗೌಡ ನಾಯಕ ಗ್ರಂಥಾಲಯ ಸಚಿವರಾಗಿದ್ದ ವೇಳೆ ತಾಲೂಕಿನ ಯುವಕರಿಗೆ ಆದ್ಯತೆ ನೀಡಲಿಲ್ಲ. ಬೇರೆ ತಾಲೂಕುಗಳಲ್ಲಿ ಗ್ರಂಥಪಾಲಕರಾಗಿ ಸೇವೆಯಲ್ಲಿದ್ದವರನ್ನು ಕಾಯಂಗೊಳಿಸಿದ್ದಾರೆಂದು ಟೀಕಿಸಿದರು.
ತಮ್ಮನ್ನು ದೇವದುರ್ಗದಿಂದ ವಿಧಾನಸಭೆಗೆ ಆಯ್ಕೆ ಮಾಡಿದಲ್ಲಿ ಮತದಾರರಿಗೆ ಸುಳ್ಳಿನ ಭರವಸೆ, ನೀಡದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮೂಡ್ಲಗುಂಡ ಮಾತನಾಡಿದರು.
ಈ ವೇಳೆ ವಿರೂಪಾಕ್ಷಪ್ಪ ಬಳೆ ಮಸರಕಲ್ ಸೇರಿ ಕೆ.ಇರಬಗೇರಾ ಗ್ರಾಪಂ ವ್ಯಾಪ್ತಿಯ ನೂರಾರು ಯುವಕರು ಮತ್ತು ಬಂಜಾರ ಸಮಾಜ ಕೆಲ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಎಪಿಎಂಸಿ ಉಪಾಧ್ಯಕ್ಷ ಮಲ್ಲಣ್ಣಗೌಡ ಗುಂಡಗುರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಗಂಗಪ್ಪಯ್ಯ ಪೂಜಾರಿ, ಬಾಲಪ್ಪ ನಾಯಕ ಮರಡಿ, ಶಿವುಕುಮಾರ ಎಲಿ ಸೇರಿ ಅನೇಕರಿದ್ದರು.