ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಜೆಪಿಗೆ ಅಗ್ನಿಪರೀಕ್ಷೆ

Lingaraj Badiger
Updated On : 4 Apr 2013, 11:07 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.3
ಕಳೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದ ಬಿಜೆಪಿಗೆ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಆ ಪಕ್ಷದಿಂದ ಆಯ್ಕೆಯಾಗಿದ್ದವರು ಬೇರೆ ಪಕ್ಷಗಳತ್ತ ಮುಖ ಮಾಡಿರುವುದು ಜಿಲ್ಲೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ.
ರಾಜ್ಯ ವಿಧಾನಸಭೆಯ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿತ್ತು. ಆದರೆ ಈಗಾಗಲೇ ಜಿಲ್ಲೆಯಲ್ಲಿನ ಪಕ್ಷದಲ್ಲಿರುವವರು ಬೇರೆ ಪಕ್ಷಗಳಿಗೆ ವಲಸೆ ಹೋಗಲಿದ್ದಾರೆಂಬ ಅನುಮಾನ ಪಕ್ಷದ ವರಿಷ್ಠರಲ್ಲಿತ್ತು. ಅದು ಈಗ ನಿಜವಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜಿಲ್ಲೆಯಲ್ಲಿ ಮೂವರು ಶಾಸಕರು ಆಯ್ಕೆಯಾಗಿದ್ದರು. ಆ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವ ಸಾಬೀತು ಮಾಡಿತ್ತು. ದೇವದುರ್ಗದಿಂದ ಶಿವನಗೌಡ ನಾಯಕ, ಲಿಂಗಸ್ಗೂರು ಕ್ಷೇತ್ರದಿಂದ ಮಾನಪ್ಪ ವಜ್ಜಲ್ ಹಾಗೂ ಮಸ್ಕಿ ಕ್ಷೇತ್ರದಿಂದ ಪ್ರತಾಪಗೌಡ ಪಾಟೀಲ್ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಗೊಂದಲಗಳ ಗೂಡು: ಆದರೆ ಆನಂತರದಲ್ಲಿ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ, ಬಗೆಹರಿಯದ ಗೊಂದಲಗಳಿಂದಾಗಿ ಈ ಮೂವರು ಶಾಸಕರು ಕಾಲದಿಂದ ಕಾಲಕ್ಕೆ ಬದಲಾದ ಸಿಎಂಗಳು ಹಾಗೂ ಪಕ್ಷದ ಅವರಿವರ ಪರ ಲಾಬಿ ಮಾಡುವುದರಲ್ಲಿಯೇ ಕಾಲಹರಣವಾಯಿತೇ ವಿನಾ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಹಾಗೂ ವೈಯಕ್ತಿಕವಾಗಿ ಬೆಳೆಯುವುದು ಸಾಧ್ಯವಾಗಲಿಲ್ಲ.
ಪರಿಣಾಮ ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು ಕಳೆದ ಮಾರ್ಚ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಹಿರಂಗವಾಗಿಯೇ ಜೆಡಿಎಸ್ ಪರ ಪ್ರಚಾರ ಕೈಗೊಳ್ಳುವ ಮೂಲಕ ತಮ್ಮ ಒಲವು ಯಾರತ್ತ ಎಂಬುದನ್ನು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನತ್ತ ಪಾಟೀಲ್: ಅದೇ ರೀತಿ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್, ಮಸ್ಕಿ ಕ್ಷೇತ್ರದಲ್ಲಿ ನಿರೀಕ್ಷಿಸಿದಂತೆ ಅಭಿವೃದ್ಧಿ ಮಾಡಲಾಗದಿದ್ದರೂ ಬಿಜೆಪಿ ಸರ್ಕಾರ ತಮಗೆ ಸಾಥ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಲೇ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಲಿಂಗಸ್ಗೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಬುಧವಾರವಷ್ಟೇ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ಮೂಲಕ ಪಕ್ಷದಿಂದ ಬಹುತೇಕ ಹೊರನಡೆದಿದ್ದಾರೆ. ಅವರು ಜೆಡಿಎಸ್‌ನಿಂದ ಲಿಂಗಸ್ಗೂರು ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಇನ್ನು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಈಗಾಗಲೇ ಬಹಿರಂಗವಾಗಿಯೇ ಕಾಂಗ್ರೆಸ್ ಪರ ನಿಂತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಬಲ ಕುಸಿದಿದೆ. ಸದ್ಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರತ್ತಲೇ ಎಲ್ಲರ ದೃಷ್ಟಿ ನೆಟ್ಟಿದೆ.
ನಾಯಕರ ಚಿತ್ತ ಎತ್ತ?: ಅವರು ಬಿಜೆಪಿ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿದ್ದರೂ ಪ್ರಸಕ್ತ ಚುನಾವಣೆಯ ವೇಳೆಗೆ ಅವರು ಬಿಜೆಪಿಯಲ್ಲಿಯೇ ಮುಂದುವರಿಯುತ್ತಾರೆಂಬ ನಂಬಿಕೆ ಕ್ಷೇತ್ರದ ಮತದಾರರಲ್ಲಿಲ್ಲ. ಜತೆಗೆ ಬಿಜೆಪಿ ಪಕ್ಷದ ಜಿಲ್ಲಾ ನಾಯಕರಿಗೆ ಶಿವನಗೌಡ ನಾಯಕರ ಚಿತ್ತ ಎತ್ತ ಎಂಬ ಅಳುಕಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ನಂತರದಲ್ಲಿ ಯಡಿಯೂರಪ್ಪ ಬಣದಲ್ಲಿಯೇ ಹೆಚ್ಚಾಗಿ ಅವರು ಗುರುತಿಸಿಕೊಂಡಿದ್ದರು. ಒಂದೆರಡು ಬಾರಿ ಅವರ ವಿರೋಧಿಗಳ ಗುಂಪಿನಲ್ಲಿಯೂ ಕಾಣಿಸಿಕೊಂಡಿದ್ದಿದೆ. ಪರಿಣಾಮ ಅವರು ಬಿಜೆಪಿಯಲ್ಲಿರುತ್ತಾರೋ ಇಲ್ಲವೋ ಎಂಬ ನಂಬಿಕೆ ಪಕ್ಷಕ್ಕಿಲ್ಲ.
ಶಿವನಗೌಡ ನಾಯಕ ಅವರು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆಂದು ಹೇಳುತ್ತಿದ್ದಾರೆ. ಆದರೆ ಅವರ ಮುಂದಿನ ನಡೆ ಮಾತ್ರ ನಿಗೂಢ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಕಳೆದ ಬಾರಿ ಕಂಡುಕೊಂಡಿದ್ದ ಸ್ಥಾನ ಹಾಗೂ ಮಾನವನ್ನು ಉಳಿಸಿಕೊಳ್ಳುವತ್ತ ಬಿಜೆಪಿ ತೀವ್ರ ಪ್ರಯತ್ನ ನಡೆಸಿದೆ. ಕಳೆದ ಬಾರಿ ಗೆದ್ದಿದ್ದ ಮೂರು ಸ್ಥಾನಗಳ ಪೈಕಿ ಸದ್ಯ ಲಿಂಗಸ್ಗೂರು ಮತ್ತು ಮಸ್ಕಿಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲ್ಲುವ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದೆ. ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಬಿಜೆಪಿ ತನ್ನ ವರ್ಚಸ್ಸು ಉಳಿಸಿಕೊಳ್ಳಲ ಪ್ರಯಾಸಪಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement