ಬುದ್ದಿನ್ನಿ ಟ್ಯಾಂಕ್ ಕಾಮಗಾರಿ ಕಳಪೆ; ಗ್ರಾಮಸ್ಥರ ಆರೋಪ
ಮುದಗಲ್: ಪಟ್ಟಣ ಸಮೀಪದ ತೆರೆಬಾವಿ ಮತ್ತು ಬುದ್ದಿನ್ನಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಿರ್ಮಿಸಲಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಪಂ.ನ ಎನ್‌ಆರ್‌ಪಿಡಬ್ಲ್ಯೂಡಿ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು ಟೆಂಡರ್ ಪಡೆದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಟ್ಯಾಂಕ್‌ಗೆ ಬಳಸಲಾದ ಸಿಮೆಂಟ್, ಮರಳು, ಕಬ್ಬಿಣದ ರಾಡುಗಳು ಕಳಪೆ ಮಟ್ಟದಾಗಿವೆ.
ಟ್ಯಾಂಕ್ ನಿರ್ಮಾಣವಾದಾಗಿನಿಂದ ಸಮರ್ಪಕವಾಗಿ ಕ್ವಿರಿಂಗ್ ಮಾಡಿಲ್ಲ. ಸುಮಾರು 6 ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿ 2 ತಿಂಗಳಲ್ಲಿ ಪೂರ್ಣ ಹಂತಕ್ಕೆ ತಲುಪಿದ್ದು ಟ್ಯಾಂಕ್ ಗುಣಮಟ್ಟದಾಗಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.
ಕಾಮಗಾರಿ ಸ್ಥಳಕ್ಕೆ ಜಿಪಂ ಎಂಜನಿಯರ್, ಎಇಇ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮದ ಮಹಿಳೆಯರಾದ ಗಂಗಮ್ಮ, ಬಾಳಮ್ಮ, ರುದ್ರಮ್ಮ, ಆದಮ್ಮ, ಹನುಮಮ್ಮ, ಲಕ್ಷ್ಮವ್ವ, ಅಮರಪ್ಪ ಜೂಲಗುಡ್ಡ, ಬಸವರಾಜ, ಚೆನ್ನಮಲ್ಲಪ್ಪ, ರಾಚಪ್ಪ, ಆದಪ್ಪ ಆಗ್ರಹಿಸಿದ್ದಾರೆ.