ರಿಮ್ಸ್ ಬೋಧಕ ಆಸ್ಪತ್ರೆ ಅವ್ಯವಸ್ಥೆ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.3
ನಗರದ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯು ಅವ್ಯವಸ್ಥೆ ಆಗರವಾಗಿದ್ದು, ಕೂಡಲೇ ಎಲ್ಲ ರೀತಿಯ ವೈದ್ಯಕೀಯ ಸೇವೆಗಳು ಜನತೆಗೆ ದೊರೆಯುವಂತೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭಗತ್ಸಿಂಗ್ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಸಿದೆ.
ಈ ಕುರಿತು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಕಲವಲದೊಡ್ಡಿ, ಬೋಧಕ ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿನಿಂದ ಅಲ್ಟ್ರಾ ಸೌಂಡ್ ಸೌಲಭ್ಯವಿಲ್ಲ. ಇದರಿಂದಾಗಿ ದಿನವೂ ನೂರಾರು ರೋಗಿಗಳು ಖಾಸಗಿಯವರ ಬಳಿ ದುಬಾರಿ ಹಣ ತೆತ್ತು ಆರೋಗ್ಯ ಸಂಬಂಧಿ ವರದಿಗಳನ್ನು ಪಡೆಯುವಂತಾಗಿದೆ ಎಂದು ಟೀಕಿಸಿದರು.
ಆರೋಪ: ಸಿಟಿ ಸ್ಕ್ಯಾನ್ ಸೇರಿದಂತೆ ವೈದ್ಯಕೀಯ ಯಂತ್ರೋಪಕರಣಗಳ ಖರೀದಿಗೆ ಈ ಹಿಂದೆ ಈ ರಿಮ್ಸ್ ಕಾಲೇಜಿನ ನಿರ್ದೇಶಕರಾಗಿದ್ದ ಡಾ. ರಾಮಯ್ಯ ಅವರು ಆದೇಶ ನೀಡಿದ್ದರು. ಆದರೆ ಅವರ ನಂತರದಲ್ಲಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ತಿಪ್ಪೇರುದ್ರಪ್ಪ ಅವರು ಖರೀದಿ ಆದೇಶ ರದ್ದುಪಡಿಸಿದ್ದಾರೆಂದು ಆರೋಪಿಸಿದರು.
ಈ ಹಿಂದೆ ನೇಮಕ ಮಾಡಲಾಗಿದ್ದ ಸ್ಟಾಫ್ ನರ್ಸ್ಗಳ ನೇಮಕಾತಿಯನ್ನು ರದ್ದುಗೊಳಿಸುವ ಮೂಲಕ ರೋಗಿಗಳಿಗೆ ಆರೈಕೆ ದೊರೆಯದಂತೆ ಮಾಡಲಾಗಿದೆ. ರಿಮ್ಸ್ ಕಾಲೇಜಿಗೆ ದೊರೆತಿದ್ದ ಎಂಸಿಐ ಮಾನ್ಯತೆಯು ಸದ್ಯದ ಬೋಧಕ ಆಸ್ಪತ್ರೆಯ ದುಸ್ಥಿತಿಯಿಂದಾಗಿ ಈ ಬಾರಿ ಮಾನ್ಯತೆ ದೊರೆಯುವುದು ಅನುಮಾನ ಎಂಬಂಥ ಸ್ಥಿತಿಯಿದೆ ಎಂದು ದೂರಿದರು.
ಚಿಕಿತ್ಸೆ ಮರೀಚಿಕೆ: ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ತಜ್ಞ ವೈದ್ಯರು ಸದ್ಯದ ಆಡಳಿತದಿಂದ ಬೇಸತ್ತು ರಾಜಿನಾಮೆ ನೀಡಿ ಹೊರನಡೆದಿದ್ದಾರೆ. ಇದರಿಂದಾಗಿ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.
ಸದ್ಯದ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದಾಗಿ ರೋಗಿಗಳು ಆಸ್ಪತ್ರೆಗೆ ಧಾವಿಸುವುದನ್ನೇ ಬಿಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆತ್ತು ಚಿಕಿತ್ಸೆ ಪಡೆವಂಥ ಸ್ಥಿತಿಯನ್ನು ರಿಮ್ಸ್ ನಿರ್ದೇಶಕರು ನಿರ್ಮಾಣ ಮಾಡಿದ್ದಾರೆ. ಮೂಲಸೌಲಭ್ಯಗಳ ಕೊರತೆಯು ಆಸ್ಪತ್ರೆಯಲ್ಲಿದ್ದರೂ ಅದರ ಪರಿಹಾರಕ್ಕೆ ರಿಮ್ಸ್ ನಿರ್ದೇಶಕ ಡಾ.ತಿಪ್ಪೇರುದ್ರಪ್ಪ ಪ್ರಯತ್ನಿಸುತ್ತಿಲ್ಲ ಎಂದು ದೂರಿದರು.
ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಶೌಚಾಲಯಗಳ ಸ್ವಚ್ಛ, ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ರೋಗಿಗಳನ್ನು ನೆಲದ ಮೇಲೆಯೇ ಮಲಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಒಪೆಕ್ ಆಸ್ಪತ್ರೆ ಮುಚ್ಚಿದ ನಂತರದಲ್ಲಿ ಅಲ್ಲಿನ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡದಿರುವುದು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸಾಬೀತು ಮಾಡಿದೆ ಎಂದು ಆರೋಪಿಸಿದರು.
ಉದಾಸೀನತೆ: ರಿಮ್ಸ್ ಕಾಲೇಜಿನಲ್ಲಿ ಈ ಹಿಂದೆ ತರಗತಿಗಳಿಗೆ ಆಗ ನಿರ್ದೇಶಕರಾಗಿದ್ದ ಡಾ. ರಾಮಯ್ಯ ಭೇಟಿ ನೀಡಿ ಬೋಧನೆ ಪರಿಶೀಲಿಸುತ್ತಿದ್ದರು. ಆದರೆ ಸದ್ಯದ ನಿರ್ದೇಶಕರು ತರಗತಿಗಳಿಗೆ ಭೇಟಿ ನೀಡುತ್ತಿಲ್ಲ. ಬೋಧನಾ ಕಾರ್ಯಕ್ರಮಗಳ ಬಗ್ಗೆ ಉದಾಸೀನತೆ ಪ್ರದರ್ಶಿಸುತ್ತಿದ್ದಾರೆ. ಇದರಿಂದಾಗಿ ಬೋಧನಾ ಗುಣಮಟ್ಟ ಕುಸಿತ ಕಂಡಿದೆ. ವಿದ್ಯಾರ್ಥಿಗಳ ವಸತಿ ನಿಲಯಗಳ ಮೇಲೆ ನಿಗಾ ಇರಿಸಿಲ್ಲ ಎದರು. ಈ ಎಲ್ಲ ಅಂಶಗಳೂ ಸೇರಿದಂತೆ ಜನತೆಗೆ ಸಮರ್ಪಕ ಆರೋಗ್ಯ ಸಂಬಂಧಿ ಸೇವೆ ನೀಡುವಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೋವಿಂದದಾಸ್, ಬಸವರಾಜ ಗಾರಲದಿನ್ನಿ, ಹನುಮಂತ ಅರೋಲಿಕರ್, ಮುದ್ದಣ್ಣ, ಚಾಂದ್ ಪಾಷಾ, ನರಸಿಂಹಲು ಸೇರಿದಂತೆ ಅನೇಕರಿದ್ದರು.