ವಸತಿ ಯೋಜನೆಯಲ್ಲಿ ಅಕ್ರಮ; ಆರೋಪ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.3
ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆಸಿರುವ ಗ್ರಾಪಂ ಪಿಡಿಒ ಮೇಲೆ ಕ್ರಮ ಕೈಗೊಳ್ಳುವಂತೆ ಹೈ.ಕ. ವಿಮೋಚನೆ ವೇದಿಕೆ ಆಗ್ರಹಿಸಿದೆ.
ಈ ಕುರಿತು ಜಿಪಂ ಸಿಇಒಗೆ ಮನವಿ ಸಲ್ಲಿಸಿರುವ ಸಂಘಟನೆಯ ರಾಮಣ್ಣ ಗಣೇಕಲ್, ಅನಿಲ್ ಕುಮಾರ್, ವಿಶ್ವನಾಥ್ ಮತ್ತಿತರರು, ವಸತಿ ಯೋಜನೆ ಅಡಿ ಗ್ರಾಪಂ ಪಿಡಿಒ 25 ಲಕ್ಷಕ್ಕೂ ಅಧಿಕ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ತಾಪಂ ಇಒ ನಿರ್ಲಕ್ಷ್ಯ: ಗ್ರಾಪಂ ವ್ಯಾಪ್ತಿಯಲ್ಲಿ 2011- 12 ಹಾಗೂ 2012- 13ನೇ ಸಾಲಿನಲ್ಲಿ ವಸತಿ ಯೋಜನೆ ಅಡಿ 42 ಬೋಗಸ್ ಫಲಾನುಭವಿಗಳನ್ನು ಸೃಷ್ಟಿಸಿ ಚೆಕ್ ನಗದು ಮಾಡಿಕೊಳ್ಳಲಾಗಿದೆ. ಇದರಲ್ಲಿ ಗ್ರಾಪಂ ಪಿಡಿಒ ಅವರು ಶಾಮೀಲಾಗಿದ್ದಾರೆ. ಈ ಬಗ್ಗೆ ತಾಪಂ ಇಒಗೆ ದೂರು ಸಲ್ಲಿಸಿದ್ದು ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ಸಂಬಂಧಿಸಿದ ಗ್ರಾಪಂ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ನಾಗಡದಿನ್ನಿ ಗ್ರಾಪಂ ಪಿಡಿಒ ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆಯುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಸಂಘಟನೆ ಆರೋಪಿಸಿದೆ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮಾಧ್ಯಮಗಳಿಗೆ ಮಾ. 27ರಂದು ಜಾಹೀರಾತು ನೀಡಿರುವ ಅವರು, ನಂತರ ಮಾ. 29ರಂದು ಟೆಂಡರ್ ರದ್ದುಗೊಳಿಸಿದ ಬಗ್ಗೆಯೂ ಜಾಹೀರಾತು ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.