ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ಹಣ ಪಾವತಿಗೆ ಆಗ್ರಹಿಸಿ ಧರಣಿ

Lingaraj Badiger
Updated On : 5 Apr 2013, 11:09 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.4
ಜಿಲ್ಲೆಯ 54 ಗ್ರಾಪಂಗಳಲ್ಲಿ ಆಡಳಿತ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಕೂಲಿ ಹಣ ಬಾಕಿ ಉಳಿಸಿಕೊಂಡಿದೆ. ಈ ಮೊತ್ತವನ್ನು ಶೀಘ್ರವಾಗಿ ಪಾವತಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ(ಗ್ರಾಕೂಸ್) ಕಾರ್ಯಕರ್ತರು ನಗರದಲ್ಲಿ ಗುರುವಾರ ಜಿಪಂ ಎದುರು ಧರಣಿ ನಡೆಸಿದರು.
ಈ ವೇಳೆ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಜಿಲ್ಲೆಯ 54 ಗ್ರಾಪಂಗಳಲ್ಲಿ ಇದುವರೆಗೆ 181 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿಗಳಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಇದುವರೆಗೆ ಜಿಪಂನಿಂದ ಉದ್ಯೋಗ ಖಾತ್ರಿಯ ಯೋಜನೆಯ ಕೂಲಿ ಪಾವತಿಸಿಲ್ಲ ಎಂದು ದೂರಿದರು.
ಸಂಕಷ್ಟ: ಬರಗಾಲ ಪರಿಸ್ಥಿತಿಯಿರುವುದರಿಂದ ಏಪ್ರಿಲ್ ತಿಂಗಳಿನಲ್ಲಿ ಕೆಲಸ ಕೇಳಿ ಅರ್ಜಿ ಸಲ್ಲಿಸಲು ಮುಂದಾಗುವ ಕೂಲಿಕಾರ್ಮಿಕರಿಗೆ ವಿಧಾನಸಭೆಯ ಚುನಾವಣೆಯ ನೆಪಮೊಡ್ಡಿ ಮರಳಿ ಕಳಿಸಲಾಗುತ್ತಿದೆ. ಇದರಿಂದ ಬಡ ಕೂಲಿಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ದುಡಿಯುವ ಕೂಲಿಕಾರ್ಮಿಕರಿಗೆ ಅವರ ಕೂಲಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪದ್ಧತಿ ಜಾರಿಗೆ ತರಲಾಗಿದೆ. ಆದರೆ ಕೂಲಿಕಾರ್ಮಿಕರು ಬ್ಯಾಂಕ್ ಖಾತೆ ತೆರೆಯುವ ನಿಟ್ಟಿನಲ್ಲಿ ಅಡಚಣೆಯಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಶೂನ್ಯ ಠೇವಣಿ ಖಾತೆಯನ್ನು ತೆರೆಯಲು ನಿರಾಕರಿಸುತ್ತಿದ್ದಾರೆಂದು ಟೀಕಿಸಿದರು.
ಬೋಗಸ್ ಬಿಲ್: ಅದೇ ರೀತಿ ಬ್ಯಾಂಕುಗಳಲ್ಲಿ ದಿನವೊಂದಕ್ಕೆ ಕೇವಲ 5 ರಿಂದ 10 ಖಾತೆಗಳನ್ನು ಮಾತ್ರ ತೆರೆಯುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, ಅದರಿಂದ ಕೂಲಿಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದಾರೆ. ಮಾರ್ಚ್‌ನಲ್ಲಿ ಜಿಲ್ಲಾ ಪಂಚಾಯಿತಿಯು ಕಾರ್ಮಿಕರಿಗೆ ಉದ್ಯೋಗ ನೀಡದೇ ವಾರ್ಷಿಕ ದಾಖಲೆಗಳ ನಿರ್ವಹಣೆಯ ನೆಪಮೊಡ್ಡಿ ಬೋಗಸ್ ಬಿಲ್ ಮೂಲಕ ಬಾಕಿ ಅನುದಾನ ಲೂಟಿ ಮಾಡುವ ಕಾರ್ಯಕ್ಕೆ ತೊಡಗಿದೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ಗುರ್ತಿಸಿದ ಕಾಮಗಾರಿ ಸ್ಥಳಕ್ಕೆ ಆಯಾ ಪ್ರದೇಶದ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಕೂಡಲೇ ಭೇಟಿ ನೀಡುತ್ತಿಲ್ಲ. ತಡವಾಗಿ ಆಗಮಿಸುವ ಮೂಲಕ ಕಾಮಗಾರಿಯ ಅಳತೆ ಮತ್ತಿತರೆ ವಿವರಗಳನ್ನು ನೀಡದೇ ತೊಂದರೆಯುಂಟು ಮಾಡುತ್ತಿದ್ದಾರೆ. ಕಾಮಗಾರಿ ಮುಗಿದ ಮೂರ್ನಾಲ್ಕು ತಿಂಗಳ ನಂತರದಲ್ಲಿ ಕೂಲಿ ಪಾವತಿಸುತ್ತಿದ್ದಾರೆಂದು ಟೀಕಿಸಿದರು.
ಹುಸಿ ಭರವಸೆ: ಕೂಲಿಕಾರ್ಮಿಕರಿಗೆ ಕೂಲಿ ಮೊತ್ತವನ್ನು ವಿಳಂಬವಾಗಿ ಪಾವತಿಸುತ್ತಿದ್ದು, ಅದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಕಾರಣ 181 ಕಾಮಗಾರಿಗಳಿಗೆ ಸಂಬಂಧಿಸಿ ಬಾಕಿ ಮೊತ್ತ ಪಾವತಿಸುವಂತೆ ಮಾ. 25ರಂದು ಮನವಿ ಮಾಡಲಾಗಿತ್ತು. ಆಗ ಅಧಿಕಾರಿಗಳು ಏ.2ರಂದು ಸಭೆ ಕರೆದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿರುವುದಾಗಿ ಜಿಪಂಗೆ ಎಚ್ಚರಿಸಿದರು.
ಹೋರಾಟದ ನೇತೃತ್ವವನ್ನು ಅಭಯ್ ವಹಿಸಿದ್ದರು. ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ನೂರಾರು ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement