ನಿರುದ್ಯೋಗಿ ಯುವಕರಿಗೆ ವಿವಿಧ ಉಚಿತ ತರಬೇತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.4
ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಹಾಗೂ ಸ್ವಾವಲಂಬಿ ಬದುಕು ಸಾಗಿಸಲು ಅನುವಾಗುವಂತೆ ಉನ್ನತಿ ಸಂಸ್ಥೆಯು ಉಚಿತವಾಗಿ ವಿವಿಧ ತರಬೇತಿಗಳನ್ನು ನೀಡುತ್ತಿದೆ ಎಂದು ಸಂಸ್ಥೆಯ ಕೇಂದ್ರದ ವ್ಯವಸ್ಥಾಪಕ ಸೆಂಥಿಲ್ಕುಮಾರ್ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು ಸಿಸ್ಕೋ ಸಂಸ್ಥೆಯ ಅಧೀನ ಸಂಸ್ಥೆಯಾಗಿದ್ದು, ರಾಜ್ಯದ ಅನೇಕ ಕಡೆ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಇಂಥ ತರಬೇತಿ ನೀಡುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವಕಾಶವನ್ನೂ ಒದಗಿಸುತ್ತಿದೆ ಎಂದು ಹೇಳಿದರು.
70 ದಿನಗಳ ತರಬೇತಿ: ರಾಜ್ಯ ಸರ್ಕಾರ ಮತ್ತು ಸಿಸ್ಕೋ ಸಂಸ್ಥೆಯ ಮಧ್ಯೆ ಕೈಗೊಂಡ ಒಪ್ಪಂದದಂತೆ ಹಿಂದುಳಿದ ಹಾಗೂ ಬಡ ನಿರುದ್ಯೋಗಿಗಳಿಗೆ ಉಚಿತವಾಗಿ ರಿಟೇಲ್ಸ್, ಫೀಲ್ಡ್ ಸೇಲ್ಸ್ ಮತ್ತು ಪ್ಯಾರಾ ಮೆಡಿಸಿನ್ ವಿಷಯಗಳ ಬಗ್ಗೆ 70 ದಿನಗಳ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಮೊದಲ ಬ್ಯಾಚ್ನಲ್ಲಿ 38 ಜನ ನಿರುದ್ಯೋಗಿಗಳು ತರಬೇತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲಿಯೇ ಅವರ ತರಬೇತಿ ಪೂರ್ಣಗೊಳ್ಳಲಿದ್ದು, ತರಬೇತಿ ನಂತರದಲ್ಲಿ ಅವರಿಗೆ ಸಂಸ್ಥೆಯೇ ಉದ್ಯೋಗವಕಾಶ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಸರ್ಕಾರಿ ಐಟಿಐ ಕಾಲೇಜಿನಲ್ಲಿ ತರಬೇತಿ: ತರಬೇತಿ ನಂತರದಲ್ಲಿ ಕನಿಷ್ಠ 3 ಸಾವಿರದಿಂದ 6 ಸಾವಿರಗಳವರೆಗೆ ವೇತನ ದೊರೆಯುವ ಉದ್ಯೋಗ ದೊರಕಿಸಲಾಗುತ್ತದೆ. 18 ವರ್ಷ ವಯೋವಾನದವರು ಹಾಗೂ ನಿರುದ್ಯೋಗಿಗಳು ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಿ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಲು ಅವರು ಮನವಿ ಮಾಡಿದರು.
ತರಬೇತಿ ವೇಳೆ ಕಂಪ್ಯೂಟರ್ ಬಳಕೆ, ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತರಬೇತಿಯು ಬೆಳಗ್ಗೆ 8ರಿಂದ ಸಂಜೆಯ 6ರವರೆಗೆ ನಡೆಯಲಿದ್ದು, 70 ದಿನಗಳ ಅವಧಿಯದ್ದಾಗಿದೆ ಎಂದು ಅವರು ಹೇಳಿದರು.
ನಗರದ ಬಡವರು ಹಾಗೂ ಹಿಂದುಳಿದವರು ಈ ತರಬೇತಿಯ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ತರಬೇತುದಾರರು ಇದ್ದರು.