ನೀತಿ ಸಂಹಿತೆ ಪಾಲನೆಗೆ ಸಭೆ
ರಾಯಚೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಸರ್ವ ಪಕ್ಷಗಳ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು.
ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷಗಳ ಪ್ರಮುಖರಿಗೆ ಚುನಾವಣೆ ಹಾಗೂ ನಾಮಪತ್ರಗಳ ಭರ್ತಿ ಮಾಡುವುದು, ನೀತಿ ಸಂಹಿತೆ ಪಾಲನೆ, ಮೆರವಣಿಗೆ, ಸಭೆ- ಸಮಾರಂಭಗಳನ್ನು ನಡೆಸುವುದು, ಚುನಾವಣಾ ಪ್ರಚಾರ ಇತ್ಯಾದಿಗಳ ಕುರಿತು ವಿವಿಧ ಪಕ್ಷಗಳ ಪ್ರಮುಖರಿಗೆ ಮಾಹಿತಿ ನೀಡಲಾಯಿತು.
ಅಭ್ಯರ್ಥಿಗಳು ತಮ್ಮ ಚುನಾವಣೆ ಖರ್ಚು, ವೆಚ್ಚಗಳ ಬಗ್ಗೆ ಸರಿಯಾದ ರೀತಿಯಲ್ಲಿ ದಾಖಲೆ ಇರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಆಯೋಗ ನಿಗದಿಪಡಿಸಿದ ಮೊತ್ತದಲ್ಲಿ ವೆಚ್ಚಗಳನ್ನು ಸರಿದೂಗಿಸಲು ಮನವಿ ಮಾಡಿದರು. ಸಭೆಯಲ್ಲಿ ಎಸ್ಪಿ ಎಸ್.ಬಿ. ಬಿಸನಳ್ಳಿ, ಸಹಾಯಕ ಆಯುಕ್ತೆ ಮಂಜುಶ್ರೀ ಸೇರಿದಂತೆ ಅನೇಕರಿದ್ದರು.