ಪಡಿತರ ಚೀಟಿ ಮರುನವೀಕರಣ ಗೊಂದಲ ನಿವಾರಿಸಲು ಆಗ್ರಹ
ಸಿಂಧನೂರು: ಕಳೆದ ಎರಡು ತಿಂಗಳ ಹಿಂದೆ ವಿತರಿಸಲಾಗಿದ್ದ ಹೊಸ ಪಡಿತರ ಚೀಟಿಗಳನ್ನು ಮರುನವೀಕರಣ ಮಾಡಿಸಬೇಕೆಂದು ಹೇಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು ಅದನ್ನು ಶೀಘ್ರವೇ ನಿವಾರಿಸುವ ಕ್ರಮಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಕೆ. ಬಾಳಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು 2009ರಲ್ಲಿ ವಿತರಿಸಲ್ಪಟ್ಟ ಪಡಿತರ ಚೀಟಿಗಳನ್ನು ಸಹ ಪುನರ್ ನವೀಕರಣ ಮಾಡಬೇಕೆಂದು ಸ್ಥಳೀಯ ಖಾಸಗಿ ಕಂಪ್ಯೂಟರ್ ಕೇಂದ್ರದವರು ಹೇಳುತ್ತಿದ್ದು ಅದಕ್ಕಾಗಿ ಒಂದು ಪಡಿತರ ಚೀಟಿಗೆ 100 ರಿಂದ 200 ರವರೆಗೆ ಹಣ ವಸೂಲಿ ಮಾಡುತ್ತಿದ್ದಾರೆಂದು ಆಪಾದಿಸಿದ್ದಾರೆ.
ಹೊಸ ರೇಷನ್ ಕಾರ್ಡ್ ಸಿಕ್ಕಿತೆಂಬ ನಿರಾಳವಾಗಿದ್ದ ಸಾರ್ವಜನಿಕರಿಗೆ ಇದರಿಂದ ಮತ್ತೊಂದು ತಲೆಬೇನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವ ಕಾರಣಕ್ಕೆ ನವೀಕರಣ ಮಾಡಿಸಬೇಕೆಂಬ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಹಾಗೆಯೇ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿರುವ ಖಾಸಗಿ ಕಂಪ್ಯೂಟರ್ ಕೇಂದ್ರದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.