ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಳಗಾನೂರು- ಪೋತ್ನಾಳ ರಸ್ತೆ ದುರಸ್ತಿ ವಿಳಂಬ

Lingaraj Badiger
Updated On : 5 Apr 2013, 11:11 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.4
ಸಿಂಧನೂರು ತಾಲೂಕಿನ ಬಳಗಾನೂರು ಪೋತ್ನಾಳ ಮಾರ್ಗದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರಯಾಣಿಕರು ಪ್ರತಿದಿನವೂ ನರಕಯಾತನೆ ಅನುಭವಿಸುತ್ತಿದ್ದಾರೆ. 28 ಕಿ.ಮೀ. ಅಂತರದ ರಸ್ತೆ ದುರಸ್ತಿಗೆ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ತಾಳಿದ ಹಿನ್ನೆಲೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಡುವ ಈ ರಸ್ತೆ ಅಲ್ಲಲ್ಲಿ ದುರಸ್ತಿಗೊಳಿಸುವ ಪ್ರಕ್ರಿಯೆ ನಡೆದಿದೆ. ಆದರೆ ಅರ್ಧಕ್ಕೆ ನಿಲ್ಲಿಸಿದ ಕಾರಣ ಬೆಣಚು ಕಲ್ಲುಗಳ ನಡುವೆ ವಾಹನಗಳು ಪ್ರಯಾಸದಿಂದ ಸಂಚರಿಸಬೇಕಾಗಿದೆ. 11 ಕಿ.ಮೀ ರಸ್ತೆ ಪಿಎಂಜಿಎಸ್‌ವೈಗೆ ಸೇರಿದರೆ, 17 ಕಿ.ಮೀ ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಎರಡು ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆ ಸಾರ್ವಜನಿಕರಿಗೆ ಶಾಪವಾಗಿ ಪರಿಣಮಿಸಿದೆ.
ಅರ್ಧಕ್ಕೆ ನಿಂತ ಕಾಮಗಾರಿ: ರಸ್ತೆ ದುರಸ್ತಿಗಾಗಿ # 4.02 ಕೋಟಿ ಅನುದಾನ ಪಿಡಬ್ಲ್ಯೂಡಿ ಇಲಾಖೆಗೆ ಮಂಜೂರಾಗಿತ್ತು. ಈ ಹಣದಲ್ಲಿ 8 ಕಿ.ಮೀ. ರಸ್ತೆ ಸುಧಾರಣೆಗೊಳಿಸಲು ಕಾಮಗಾರಿ ಆರಂಭಿಸಲಾಯಿತು. ನಾಲ್ಕು ತಿಂಗಳಲ್ಲಿ ಕೇವಲ 4 ಕಿ.ಮೀ ರಸ್ತೆ ದುರಸ್ತಿಗೊಳಿಸಿ ಕೈ ತೊಳೆದುಕೊಳ್ಳಲಾಯಿತು. ಗುತ್ತಿಗೆದಾರರಿಗೆ ಬಿಲ್ ಪಾವತಿಸದ ಕಾರಣ ಉಳಿದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಕಡಬೂರಿನಿಂದ ಉದ್ಬಾಳ ಮತ್ತು ಬಳಗಾನೂರು ಮುಖ್ಯರಸ್ತೆಯಿಂದ ಪ್ರೌಢಶಾಲೆವರೆಗೆ ಒಟ್ಟು 4 ಕಿಮೀ ರಸ್ತೆ ಮಾತ್ರ ಡಾಂಬರು ಕಂಡಿದೆ. ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದಲ್ಲಿ 4 ಕಿ.ಮೀ. ರಸ್ತೆ ದುರಸ್ತಿಗೊಳಿಸಲಾಗಿದೆ. ಇನ್ನುಳಿದ ರಸ್ತೆ ದುರಸ್ತಿ ಕೆಲಸ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಕೂಡಲೇ ಕೆಲಸ ಪೂರ್ಣಗೊಳಿಸುವುದಾಗಿ ಪಿಡಬ್ಲ್ಯೂಡಿ ಇಲಾಖೆಯ ಎಇಇ ಜಿ. ನಾಗರಾಜ ತಿಳಿಸಿದರು.
ದೂರು: ಒಟ್ಟು 28 ಕಿ.ಮೀ ರಸ್ತೆಯಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ದುರಸ್ತಿಗೊಳಿಸಿ ಹಣ ಲಪಟಾಯಿಸುವ ಹುನ್ನಾರ ನಡೆಯುತ್ತಿದೆಯೇ ಹೊರತು ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ನಿರ್ಮಿಸುವಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆನ್ನುವುದು ಸಾರ್ವಜನಿಕರ ದೂರು.
ತೊಂದರೆ: ಹದಗೆಟ್ಟ ರಸ್ತೆಯಲ್ಲಿ ಕೆಲಸ ಕಾರ್ಯಗಳಿಗೆ ಪಟ್ಟಣಗಳನ್ನು ಸಂಪರ್ಕಿಸಲು ಜನರು ಪ್ರಯಾಸ ಪಡುತ್ತಿದ್ದಾರೆ. ನಿಗದಿತ ಸಮಯದಲ್ಲಿ ಸರ್ಕಾರಿ ಬಸ್‌ಗಳು ಸಂಚಾರ ಇಲ್ಲದ ಕಾರಣ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂದಿರುವುದರಿಂದ ಅಪಾಯದ ತೊಂದರೆ ಎದುರಿಸುತ್ತಿದ್ದಾರೆ.
ಮನವಿ: ಸುತ್ತಮುತ್ತಲಿನ ಗ್ರಾಮಗಳಿಗೆ ಬಳಗಾನೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ರಸ್ತೆ ದುರಸ್ತಿ ಕಡೆಗೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಗಮನಹರಿಸಿ ರಸ್ತೆ ದುರಸ್ತಿಗೆ ಚುರುಕು ಮುಟ್ಟಿಸಬೇಕೆಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ಮುದೇಗೌಡ್ರು, ಯುವ ಮುಖಂಡ ಮಲ್ಲಿಕಾರ್ಜುನ ಸಾಹುಕಾರ ಸಜ್ಜನ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement