ರು. 11 ಲಕ್ಷ ಮೌಲ್ಯದ ನಕಲಿ ಬಿತ್ತನೆ ಬೀಜ ಜಪ್ತಿ; ಬಂಧನ
ರಾಯಚೂರು: ನಗರದ ಎನ್ಜಿಒ ಕಾಲನಿಯ ಬಳಿ ನಕಲಿ ಹತ್ತಿ ಬಿತ್ತನೆ ಬೀಜ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಅಪಾರ ಪ್ರಮಾಣದ ಬಿತ್ತನೆ ಬೀಜ ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಆಂಧ್ರದ ಪ್ರಕಾಶಂ ಜಿಲ್ಲೆಯ ಹದ್ದಂಕಿ ಗ್ರಾಮದ ವೆಂಕಟೇಶ್ವರಲು(27) ಎಂದು ಗುರುತಿಸಲಾಗಿದೆ.
ಈತ ನಗರದ ಎನ್ಜಿಒ ಕಾಲನಿಯ ಮೂಲಕ ವಾಹನದಲ್ಲಿ 17 ಚೀಲಗಳಲ್ಲಿ ವಿವಿಧ ಪ್ರಖ್ಯಾತ ಕಂಪನಿಗಳ ಹೆಸರಿನಲ್ಲಿ ನಕಲಿ ಬಿತ್ತನೆ ಬೀಜಗಳನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 17 ಚೀಲ ಬಿತ್ತನೆ ಬೀಜ, ನಕಲಿ ಬಿತ್ತನೆ ಬೀಜ ತಯಾರಿಕೆ ಯಂತ್ರ ಮತ್ತು ಪ್ಯಾಕೇಟ್ ಮಾಡುವ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಬಿತ್ತನೆ ಬೀಜಗಳು ಸುಮಾರು ರು. 11ಲಕ್ಷ ಮೌಲ್ಯದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಕೋಟೆ ಸ್ವಾಮಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.