ಸಿಎಂ ಸೇರಿದಂತೆ ಮಂತ್ರಿಗಳು ಜೈಲು ಸೇರಿದ್ದೇ ಬಿಜೆಪಿ ಸಾಧನೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.4
ಆಪರೇಷನ್ ಕಮಲದ ಮೂಲಕ ಸಂವಿಧಾನದ ಆಶಯಕ್ಕೆ ಕಪ್ಪುಚುಕ್ಕೆಯಾಗುವಂತೆ ಮಾಡಿದ್ದು ಬಿಜೆಪಿ. ಪಕ್ಷ ಅಧಿಕಾರಕ್ಕಾಗಿ ಕಿತ್ತಾಡಿ, ರಾಜ್ಯದ ಮಾನವನ್ನು ಹರಾಜು ಮಾಡುವ ಮೂಲಕ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಕೆಜೆಪಿ, ಬಿಎಸ್ಆರ್ ಅಧಿಕಾರ ದಾಹಕ್ಕೆ ಪ್ರತ್ಯೇಕಗೊಂಡರೂ, ಅವುಗಳ ಮುಖ ಒಂದೇ ಆಗಿದೆ. ಜೆಡಿಎಸ್ ಅಪ್ಪ-ಮಕ್ಕಳಿಗೆ ಸೀಮಿತವಾದ ಪಕ್ಷವಾಗಿದೆ. ಕಾಂಗ್ರೆಸ್ನಿಂದ ಮಾತ್ರ ಸ್ಥಿರ, ಅಭಿವೃದ್ಧಿ ಪರ ಆಡಳಿತ ನೀಡಲು ಸಾಧ್ಯ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮುಖ್ಯಮಂತ್ರಿ ಆದಿಯಾಗಿ ಮಂತ್ರಿಗಳು ಜೈಲು ಸೇರುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ವಿದ್ಯುತ್ ಇಲ್ಲ: 1 ಲಕ್ಷ ಕೋಟಿ ರುಪಾಯಿಗೂ ಅಧಿಕ ಬಜೆಟ್ ಮಂಡಿಸಿದರೂ ಕನಿಷ್ಟ 12 ತಾಸು ವಿದ್ಯುತ್ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಕಳೆದ 5 ವರ್ಷದಲ್ಲಿ ಬಿಜೆಪಿ ಹಲವಾರು ಹಗರಣಗಳಲ್ಲಿ ತೊಡಗುವ ಮೂಲಕ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದೆ. ಈ ಬಾರಿ ಕಾಂಗ್ರೆಸ್ನು ಮತದಾರರು ಬೆಂಬಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.
ನೀರಾವರಿ ಯೋಜನೆಗಳಿಗೆ ಆದ್ಯತೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ನು ಬೆಂಬಲಿಸುವ ಮೂಲಕ ಇತರ ಪಕ್ಷಗಳಿಗೆ ಪಾಠ ಕಲಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತ ಬರಲಿದೆ. ಸಿಂಧನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ತುಂಗಭದ್ರಾ, ಕೃಷ್ಣಾ ನದಿಗಳ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಹಿತ ಕಾಯಲಿದೆ. ಸ್ಥಳೀಯವಾಗಿಯೂ ಕಾಂಗ್ರೆಸ್ಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಎನ್. ಶಿವನಾಗಪ್ಪ, ಜಿ.ಪಂ. ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಪಾಟೀಲ್ ಎಂ. ಕಾಳಿಂಗಪ್ಪ, ಎನ್. ಭೀಮನಗೌಡ ಗೊರೇಬಾಳ, ಶರಣಪ್ಪ, ತಿಪ್ಪಣ್ಣ, ಲಕ್ಷ್ಮಯ್ಯ, ಗೊರೇಬಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ದುರ್ಗಾಪ್ರಸಾದ, ನಗರಸಭಾ ಸದಸ್ಯ ಶೇಖರಪ್ಪ ಗಿಣಿವಾರ ಹಾಗೂ ಇತರರು ಪಾಲ್ಗೊಂಡಿದ್ದರು.