ಕೆರೆಯಲ್ಲಿ ಮುಳುಗಿ ಮೂವರ ಸಾವು
ರಾಯಚೂರು: ಕೆರೆಯೊಂದರಲ್ಲಿ ಬಟ್ಟೆ ತೊಳೆಯಲು ತೆರಳಿದ ತಾಯಿ ಹಾಗೂ ಇಬ್ಬರು ಮಕ್ಕಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮಾನವಿ ಪಟ್ಟಣದ ಹೊರವಲಯದ ಚೀಕಲಪರ್ವಿ ರಸ್ತೆಯ ಗುಡ್ಡದ ಪಕ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ. ಮಾನವಿ ಪಟ್ಟಣದ ಜನತಾ ಕಾಲೋನಿಯ ದುರುಗಮ್ಮ (28) ಮತ್ತು ಆಕೆಯ ಮಕ್ಕಳಾದ ಯಂಕಮ್ಮ (9), ಲಿಂಗಪ್ಪ (6) ಮೃತಪಟ್ಟವರು. ತಾಯಿ ಬಟ್ಟೆ ತೊಳೆಯುವಾಗ ಕಡಿಮೆ ನೀರಿರುವಲ್ಲಿ ಮಕ್ಕಳು ಸ್ನಾನ ಮಾಡುತ್ತಿದ್ದರು. ನಂತರ ಆಳವಿರುವೆಡೆ ಹೋಗಿ ಮುಳುಗಿದ್ದಾರೆ. ಇದನ್ನು ಕಂಡು ದುರುಗಮ್ಮ ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದು, ಮೂವರು ನೀರಿನ ಸುಳಿಗೆ ಸಿಲುಕೆ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಆಕಸ್ಮಿಕ: 70 ಲಕ್ಷದ ಹತ್ತಿ ಭಸ್ಮ
ಧಾರವಾಡ: ಇಲ್ಲಿಗೆ ಸಮೀಪದ ಬೇಲೂರು ಎಚ್ಪಿಸಿಎಲ್ ರೋಡ್ನ ರಾಜೇಶ್ ಕೊಟೆನ್ ಜಿನ್ನಿಂಗ್ ಫ್ಯಾಕ್ಟರಿಗೆ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹತ್ತಿ ಸುಟ್ಟು ಭಸ್ಮವಾಗಿದೆ. ನಾರಾಯಣ ವಿ. ಕೊಪರ್ಡೆ ಎಂಬವರಿಗೆ ಸೇರಿದ್ದ ಈ ಕಂಪನಿಯು ಕಚ್ಚಾ ಹತ್ತಿಯನ್ನು ಜಿನ್ನಿಂಗ್ ಮಷಿನ್ಗೆ ಹಾಕಿ ಉತ್ತಮ ಗುಣಮಟ್ಟದ ಹತ್ತಿ ತಯಾರಿಸುವ ಸಂದರ್ಭದಲ್ಲಿ ಕಲ್ಲಿನ ಚೂರೊಂದು ಮಷಿನ್ನಲ್ಲಿ ಸಿಲುಕಿ ಕಿಡಿ ಹೊತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಸುಮಾರು 310 ಕ್ವಿಂಟಲ್ ಹತ್ತಿ, 800 ಕ್ವಿಂಟಲ್ ಕಚ್ಚಾ ಅರಳೆ ಸೇರಿದಂತೆ ಅಂದಾಜು ರು. 70 ಲಕ್ಷ ಹಾನಿಯಾಗಿದೆ.
ರಾಮಮಂದಿರ ನಿರ್ಮಾಣ ಶತಃಸಿದ್ಧ
ಗಂಗಾವತಿ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸುವುದು ಶತಃಸಿದ್ಧ ಎಂದು ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣಭಾಯಿ ತೊಗಾಡಿಯ ಹೇಳಿದರು. ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ಅವರು ಆಂಜನೇಯನ ದರ್ಶನ ಪಡೆದು ಪತ್ರಕರ್ತರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣದ ಆಂದೋಲನ ರಾಜಕೀಯ ಆಂದೋಲನವಲ್ಲ. ಅದು ಧಾರ್ಮಿಕ ಆಂದೋಲನ. ಈ ಹಿಂದೆ ರಾವಣ ರಾಕ್ಷಸನಂತಿದ್ದ. ಈಗ ದೇಶದಲ್ಲಿ ಜಿಹಾದಿ ರಾಕ್ಷಸರು ಹೆಚ್ಚಾಗಿದ್ದು, ಸರ್ವನಾಶ ಮಾಡಲು ಹೊರಟಿದ್ದಾರೆ. ಇಂಥವರನ್ನು ನಾಶ ಮಾಡಲು ಹಿಂದುಗಳಿಗೆ ದೇವರು ಶಕ್ತಿ ನೀಡಬೇಕೆಂದರು. ಕರ್ನಾಟಕದಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಬೇಕು. ಪ್ರಸ್ತುತ ಚುನಾವಣೆಯಲ್ಲಿ ಯಾವುದೇ ಪಕ್ಷದವರು ಹಿಂದುಗಳನ್ನು ನಿರ್ಲಕ್ಷಿಸಬಾರದೆಂದರು.