ಜೆಸ್ಕಾಂಗೆ ಬೀಗ ಪ್ರತಿಭಟನೆ
ಸಿಂಧನೂರು: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಆಕ್ರೋಶಭರಿತರಾದ ತಾಲೂಕಿನ ಗಾಂಧಿನಗರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಶುಕ್ರವಾರ ಸ್ಥಳೀಯ ಜೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ರಾತ್ರಿ ಸಮಯದಲ್ಲಿ ಕನಿಷ್ಠ ಅರ್ಧ ಗಂಟೆ ಸಹ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸರ್ಕಾರ ಮತ್ತು ಇಂಧನ ಇಲಾಖೆ ಮನುಷ್ಯರನ್ನು ಅನಾಗರಿಕರಂತೆ ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಪ್ರಾರಂಭವಾಗುತ್ತಿದ್ದಂತೆ ಹಲವಾರು ರೈತರು ಏಕಾಏಕಿ ಬಂದು ಕಾರ್ಯಾಲಯಕ್ಕೆ ಬೀಗ ಜಡಿದರು. ಬೆಳಗಿನ 10 ಗಂಟೆಯಿಂದ 11ರವರೆಗೆ ಅಧಿಕಾರಿಗಳು ಮತ್ತು ರೈತರ ಮಧ್ಯೆ ವಿದ್ಯುತ್ ಪೂರೈಕೆ ಬಗ್ಗೆ ಚರ್ಚೆ ನಡೆಯಿತು. ಹಗಲಿನಲ್ಲಿ ಪೂರೈಕೆ ಮಾಡುತ್ತಿರುವ ವಿದ್ಯುತ್ ಅವಧಿಯಲ್ಲಿ ಒಂದು ತಾಸು ಕಡಿತಗೊಳಿಸಿ ರಾತ್ರಿ ಸಮಯದಲ್ಲಿ ಪೂರೈಕೆ ಮಾಡುವುದಾಗಿ ಗೊರೇಬಾಳ ವಿಭಾಗೀಯ ಅಧಿಕಾರಿ ಕೇಶವ ತಿಳಿಸಿದರು.
ಮಾತಿನ ಚಕಮಕಿ: ಈ ಮಧ್ಯೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅಂತಿಮವಾಗಿ ಏನೇ ತೊಂದರೆ ಆದರೂ ತಾಲೂಕಿನ ಗಾಂಧಿನಗರಕ್ಕೆ ರಾತ್ರಿ 8 ಗಂಟೆ ನಂತರ ನಿರಂತರ ಮೂರು ತಾಸು, ಹಗಲಿನಲ್ಲಿ ಐದು ತಾಸು ವಿದ್ಯುತ್ ಪೂರೈಸುವುದಾಗಿ ಜೆಸ್ಕಾಂ ಗೊರೇಬಾಳ ವಿಭಾಗಾಧಿಕಾರಿ ಕೇಶವ ಭರವಸೆ ನೀಡಿದ ನಂತರವೇ ಬೀಗ ತೆರೆದು ಕಚೇರಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಯಿತು.