ನೀರಿನ ಸಮಸ್ಯೆ; ನಗರಸಭೆ ಜೆಇಗೆ ದಿಗ್ಬಂಧನ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.5
ನಗರದ ಹರಿಜನವಾಡ ಪ್ರದೇಶದಲ್ಲಿ ನೀರು ಪೂರೈಕೆ ಮತ್ತು ನಳದ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ನಗರಸಭೆಯ ಜೆಇ ಅಸಭ್ಯ ವರ್ತನೆ ಖಂಡಿಸಿ ಹರಿಜನವಾಡಾ ಪ್ರದೇಶದ ನಿವಾಸಿಗಳು ಶುಕ್ರವಾರ ಇಲ್ಲಿನ ಗಂಗಾನಿವಾಸದಲ್ಲಿ ನಗರಸಭೆಯ ಜೆಇಗೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗಂಗಾನಿವಾಸ ಪ್ರದೇಶದ ನೀರಿ ಟ್ಯಾಂಕ್ ಗೇಟ್ ಬಳಿ ಸೇರಿದ ನೂರಾರು ನಿವಾಸಿಗಳು ಜೆಇ ಕೃಷ್ಣಪ್ಪ ನೀರು ಪೂರೈಕೆಯ ವಿಷಯದಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಪಟ್ಟು ಹಿಡಿದರು.
ಉದ್ವಿಗ್ನ ಪರಿಸ್ಥಿತಿ: ಹರಿಜನವಾಡ ಪ್ರದೇಶದಲ್ಲಿ ಗುರುವಾರ ಜನತೆಗೆ ಅವಾಚ್ಯವಾಗಿ ಜೆಇ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು. ಈ ವೇಳೆ ಗಂಗಾನಿವಾಸ ಪ್ರದೇಶದ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಎಇಇ ವೆಂಕಟೇಶ್ ಮತ್ತು ಎಇ ಮೋಹನ್ ರಾಜ್ ಅವರು ಪ್ರತಿಭಟನಾ ನಿರತರೊಂದಿಗೆ ಸಮಾಲೋಚನೆ ನಡೆಸಿ ಗುರುವಾರ ಜೆಇ ವರ್ತಿಸಿದ ರೀತಿಗೆ ಕ್ಷಮೆಯಾಚಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.
ಇಂಥ ಘಟನೆಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದ ಅಧಿಕಾರಿಗಳು ಸಮರ್ಪಕ ನೀರೊದಗಿಸುವ ಭರವಸೆ ಕೊಟ್ಟ ನಂತರದಲ್ಲಿ ಪ್ರತಿಭಟನಾ ನಿರತರು ಅಲ್ಲಿಂದ ತೆರಳಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಜೆ.ಮಾರೆಪ್ಪ, ಹನಮಂತು ಮೇಸ್ತ್ರಿ, ಶಂಶಾಲಂ, ರವೀಂದ್ರ ಕುಮಾರ್, ದೇವರಾಜ್, ಅಂಜನರೆಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.