ಮನೆಯಲ್ಲಿ ಕಳವು: ಅಪಾರ ಆಸ್ತಿ ಲೂಟಿ
ರಾಯಚೂರು: ನಗರದ ಜಹೀರಾಬಾದ್ ಪ್ರದೇಶದ ಮನೆಯೊಂದರಲ್ಲಿ ಗುರುವಾರ ತಡರಾತ್ರಿ ಕಳವು ಸಂಭವಿಸಿದ್ದು, ಕಳ್ಳರು ಅಪಾರ ಆಸ್ತಿ ದೋಚಿದ್ದಾರೆ.
ಬಡಾವಣೆಯ ಮಲ್ಲಿಕಾರ್ಜುನ ಎಂಬುವವರ ಮನೆಯ ಬಾಗಿಲು ಬೀಗ ಮುರಿದಿರುವ ಕಳ್ಳರು ಮನೆಯಲ್ಲಿದ್ದ 20 ತೊಲೆ ಚಿನ್ನಾಭರಣ, 20 ಸಾವಿರ ನಗದು ಲೂಟಿ ಮಾಡಿದ್ದು, ಮನೆಯವರು ಶ್ರೀಶೈಲಂಗೆ ಹೋಗಿದ್ದನ್ನು ಗಮನಿಸಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಕರವೇಗೆ ನೇಮಕ
ರಾಯಚೂರು: ಜೈ ಕನ್ನಡ ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರರಾಗಿ ಆರ್.ಗೌಸ್ ಪಾಷಾ ವಕೀಲರನ್ನು ನೇಮಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಅಸ್ಕಿಹಾಳ ಮತ್ತು ಗೌರವಾಧ್ಯಕ್ಷ ಶ್ರೀಕಾಂತ ವಕೀಲರು, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಸಂಘಟನೆಗೆ ಸೂಕ್ತ ರೀತಿಯಲ್ಲಿ ಕಾನೂನು ಸಂಬಂಧಿ ಸಲಹೆ ನೀಡುವಂತೆ ತಿಳಿಸಿದ್ದಾರೆ.
'ಮಣ್ಣಿನ ಪರೀಕ್ಷೆಗೆ ಇದೇ ತಿಂಗಳು ಸಮಯ'
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.5
ಮಣ್ಣಿನ ಮಾದರಿ ಪರೀಕ್ಷೆಗಾಗಿ ತೆಗೆಯಲು ಏಪ್ರಿಲ್ ತಿಂಗಳ ಸೂಕ್ತ ಸಮಯ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿರುವ ಮಣ್ಣು ಪರೀಕ್ಷೆ ಮಾಡಿಸಿ ಸಸ್ಯಕ್ಕೆ ಬೇಕಾಗುವ ಪೋಷಕಾಂಶಗಳ ಮಟ್ಟವನ್ನು ತಿಳಿದುಕೊಳ್ಳಬಹುದು ಎಂದು ಸಸ್ಯ ವೈದ್ಯ ಕೃಷಿಕರ ಬಂಧು, ನಿವೃತ್ತ ತಾಂತ್ರಿಕ ಸಹಾಯಕ ಸಿದ್ರಾಮಪ್ಪ ಬಿ. ಶಹಾಬಾದಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ಉತ್ತಮ ಬೆಳೆಯ ಇಳುವರಿಗೆ ಪೋಷಕಾಂಶಗಳ ನಿರ್ವಹಣೆ ಅತಿ ಅವಶ್ಯ. ಬೆಳೆಗೆ ಬೇಕಾಗುವ ಗೊಬ್ಬರ, ಭೂಮಿಯಲ್ಲಿರುವ ಹುಳಿ(ಆಮ್ಲ) ಕ್ಷಾರ ಮುಂತಾದ ದೋಷಗಳನ್ನು ನಿವಾರಿಸುವ ಕ್ರಮವನ್ನು ತಿಳಿದುಕೊಳ್ಳಲು ಮತ್ತು ಭೂಮಿಯಲ್ಲಿಯ ಪಿಚ(ರಸಸಾರ) ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬಿತ್ತನೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಭೂಮಿಯ ಫಲವತ್ತತೆ ಉಳಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.