ಕುಡಿವ ನೀರಿಗೆ ಆಗ್ರಹಿಸಿ ಮನವಿ
ಕನ್ನಡ ಪ್ರಭವಾರ್ತೆ, ಸಿಂಧನೂರು, ಏ.6
ಹಲವು ದಿನಗಳಿಂದ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ತಕ್ಷಣ 36ನೇ ಉಪ ಕಾಲವೆಗೆ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಶ್ರೀಪುರಂಜಂಕ್ಷನ್, ಮಲ್ಕಾಪುರಕ್ಯಾಂಪ್, ಸಾಸಲಮರಿಕ್ಯಾಂಪ್, ಸಾಸಲಮರಿ ಮತ್ತಿತರ ಗ್ರಾಮಗಳಲ್ಲಿ ಈಗಾಗಲೇ ಕೆರೆಗಳಲ್ಲಿ ನೀರು ಬತ್ತಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈಗ ನೀರು ಬಿಡದಿದ್ದರೆ, ಮುಂಬರುವ ಎರಡು ತಿಂಗಳ ಕಾಲ ನೀರಿಗಾಗಿ ಹಾಹಾಕಾರ ಉಂಟಾಗುವ ಪರಿಸ್ಥಿತಿ ಇರುವುದರಿಂದ ಜಿಲ್ಲಾಧಿಕಾರಿ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಕೂಡಲೇ ಕ್ರಮ ಕೈಗೊಳ್ಳುವಂತೆ ರಂಗಾರೆಡ್ಡಿ, ಎಸ್.ಮುತ್ತಪ್ಪ, ಬಿ.ವಿ.ಪ್ರಸಾದ, ಎ.ರಾಮಬಾಬು ಮತ್ತಿತರರು ತಹಸೀಲ್ದಾರ್ ಗಮನ ಸೆಳೆದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಈಗಾಗಲೇ ಲಿಂಗಸ್ಗೂರು ಸಹಾಯಕ ಆಯುಕ್ತ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಶನಿವಾರ ಮತ್ತು ಭಾನುವಾರ ನೀರು ಬಿಡಲು ಸೂಚಿಸಿದ್ದಾರೆ. ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬೆಳಗುರ್ಕಿ ಬಸವರಾಜ, ಬಿ.ಅಂಬಣ್ಣ, ವೆಂಕಟೇಶ ಸೇರಿದಂತೆ ನೂರಾರು ರೈತರು ಇದ್ದರು.