ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ್ಯಾಯಾಲಯದ ಅಧಿಕಾರಿಗಳಂತೆ ಕಾರ್ಯ ನಿರ್ವಹಿಸಿ

Vishwanath S
Updated On : 7 Apr 2013, 1:16 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.6
ವಕೀಲರು ನ್ಯಾಯಾಲಯದ ಅಧಿಕಾರಿಗಳು ಎಂದು ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ವಕೀಲರು ನ್ಯಾಯಾಲಯದ ಅಧಿಕಾರಿಗಳಂತೆ ಘನತೆಯಿಂದ ಕಾರ್ಯನಿರ್ವಹಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಕರೆ ನೀಡಿದರು.
ವಕೀಲರ ಸಂಘದಿಂದ ಶನಿವಾರ ಜರುಗಿದ ಕಿರಿಯ ಶ್ರೇಣಿ ನ್ಯಾಯಾಧೀಶರ ನಿವಾಸದ ಉದ್ಘಾಟನೆ ನಂತರ ನಡೆದ ಸರಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರು ನಿರಂತರ ಅಧ್ಯಯನಶೀಲರಾಗಿ ತಮ್ಮ ಪ್ರಕರಣಗಳ ಬಗ್ಗೆ ನ್ಯಾಯಾಧೀಶರಿಗೆ ಸಮರ್ಪಕ ಮಾಹಿತಿ ನೀಡಬೇಕು.
ಕಿರಿಯ ವಕೀಲರು ವೃತ್ತಿಯಲ್ಲಿ ಆಸಕ್ತಿ ಬೆಳಸಿಕೊಂಡು ವೃತ್ತಿಬದ್ಧತೆಯನ್ನು ಮೆರೆಯಬೇಕು. ಹಿರಿಯ ವಕೀಲರನ್ನು ಗೌರವದಿಂದ ಕಾಣಬೇಕೆಂದು ಸಲಹೆ ನೀಡಿದರು.
ಕಕ್ಷಿದಾರರಿಗೆ ಪೀಡಿಸಬೇಡಿ: ತಮ್ಮ ಬಳಿ ಬರುವ ಕಕ್ಷಿದಾರರನ್ನು ಅವಮಾನ ಮಾಡದೆ, ಹಣಕ್ಕಾಗಿ ಪೀಡಿಸದೆ, ಬಡ ಕಕ್ಷಿದಾರರ ಹಕ್ಕುಗಳಿಗೆ ಪ್ರಾಮಾಣಿಕವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು. ಸಿವಿಲ್ ಪ್ರಕರಣಗಳನ್ನು ನಡೆಸುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು. ಕೇವಲ ಎಂವಿಸಿ, ಎಲ್‌ಎಸಿ ಕೇಸುಗಳಿಗೆ ಸೀಮಿತವಾಗಬಾರದೆಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ್ ಮಾತನಾಡಿ, ಯುದ್ಧಕ್ಕೆ ಸಜ್ಜಾಗಿ ರಣಾಂಗಣಕ್ಕೆ ಹೋಗುವ ಸೈನಿಕರಂತೆ ನ್ಯಾಯವಾದಿಗಳು ಪ್ರತಿದಿನ ತಮ್ಮ ಪ್ರಕರಣಗಳ ಅಧ್ಯಯನದೊಂದಿಗೆ ಕೇಸು ನಡೆಸಲು, ವಾದಿಸಲು ನ್ಯಾಯಾಲಯಕ್ಕೆ ಬರಬೇಕು. ಮೊದಲು ಓದಿನ ಕಡೆ ಗಮನ ಕೊಡಬೇಕು. ನಂತರ ಹಣ ವಕೀಲರ ಹಿಂದೆ ತಾನಾಗಿಯೇ ಹರಿದು ಬರುತ್ತದೆ ಎಂದು ಹೇಳಿದರು.
ಭರವಸೆ- ಸಂತಸ: ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ, ಇಲ್ಲಿನ ವಕೀಲರ ಬಹುವರ್ಷಗಳ ಬೇಡಿಕೆಯಾಗಿದ್ದ ಹಿರಿಯ ಶ್ರೇಣಿ ನ್ಯಾಯಾಲಯದ ಕಾಯಂ ಪೀಠ ಮಂಜೂರು ಮಾಡಲು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡರು ಭರವಸೆ ನೀಡಿರುವುದು ಇಡೀ ವಕೀಲರ ಸಂಘಕ್ಕೆ ಸಂತಸ ತಂದಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ರಾಮನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ಶ್ರೇಣಿ ನ್ಯಾಯಾಲಯದ ಅವಶ್ಯಕತೆ ಕುರಿತು ಲಿಂಗಸ್ಗೂರು ಹಾಗೂ ಸಿಂಧನೂರು ನ್ಯಾಯಾಲಯಗಳ ಪ್ರಕರಣಗಳನ್ನು ಸಮೀಕರಿಸಿ ಮಾತನಾಡಿದರು. ಪ್ರಕರಣಗಳು ವಕೀಲರಿಗೆ ಮಾರ್ಗದರ್ಶಕವಾಗಿವೆ. ಅವುಗಳ ಉದಾಹರಣೆಗಳನ್ನು ಸದಾ ಗಮನಿಸುತ್ತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಜಿ.ನಾಗರಾಜ ಉಪಸ್ಥಿತರಿದ್ದರು. ನಿರುಪಾದೆಪ್ಪ ಗುಡಿಹಾಳ ಪ್ರಾರ್ಥಿಸಿದರು. ಬಿ.ಚನ್ನಪ್ಪ ಸ್ವಾಗತಿಸಿದರು. ಜೆ.ರಾಯಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement