'ರಾಗಾ', 'ನಮೋ', 'ಸೋಗಾ' ಪ್ರಚಾರದಿಂದ ಲಾಭವಿಲ್ಲ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.6
ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಜ್ಯ ಚುನಾವಣೆಯಲ್ಲಿ ಪ್ರಚಾರ ಕೈಗೊಂಡರೆ ಅದರಿಂದ ಆಯಾ ಪಕ್ಷಗಳಿಗೆ ಯಾವುದೇ ಲಾಭವಾಗದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮಾನವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಮಟ್ಟದ ರಾಜಕೀಯ ನಾಯಕರು ರಾಜ್ಯದಲ್ಲಿ ಪ್ರಚಾರ ಕೈಗೊಂಡ ಮಾತ್ರಕ್ಕೆ ಪಕ್ಷಗಳಿಗೆ ಗೆಲವು ದೊರೆಯುತ್ತದೆ ಎಂಬುದು ಸುಳ್ಳು. ರಾಜ್ಯದ ಜನತೆಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. ಕೆಜೆಪಿಯಿಂದ ಮಾತ್ರ ಜನರ ಆಶೋತ್ತರಗಳು ಈಡೇರಲು ಸಾಧ್ಯ ಎಂದು ಹೇಳಿದರು.
ಜೆಡಿಎಸ್- ಬಿಜೆಪಿ ಒಳಒಪ್ಪಂದ: ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ. ಸದ್ಯ ಈ ಎರಡೂ ಪಕ್ಷಗಳು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಅವಲೋಕಿಸಿದರೆ ಅದು ಗೊತ್ತಾಗುತ್ತಿದೆ. ಆದರೆ ಕೆಜೆಪಿ ಮಾತ್ರ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಕೈಜೋಡಿಸಿಲ್ಲ ಎಂದು ಹೇಳಿದರು.
ಬಿಜೆಪಿ ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವವರಿಗೆ ಟಿಕೆಟ್ ನೀಡಿಲ್ಲ ಎಂಬ ಮಾತು ಈಶ್ವರಪ್ಪ ಅವರಿಂದ ಕೇಳಿಬಂದಿದೆ. ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪ್ರಕರಣ ವಿಚಾರಣೆಯಲ್ಲಿದೆ. ಆದರೂ ಅವರಿಗೆ ಟಿಕೆಟ್ ನೀಡಿರುವುದು ಆ ಪಕ್ಷದ ಸ್ಥಿತಿಯನ್ನು ಸಾಬೀತು ಮಾಡಿದೆ ಎಂದು ಟೀಕಿಸಿದರು.
10ರಂದು ಪ್ರಣಾಳಿಕೆ ಬಿಡುಗಡೆ: ಕೆಜೆಪಿ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. 4ನೇ ಪಟ್ಟಿಯನ್ನು ಮುಂದಿನ ನಾಲ್ಕು ದಿನಗಳಲ್ಲಿ ಹಾಗೂ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಏ.10ರಂದು ಬಿಡುಗಡೆಗೊಳಿಸುವುದಾಗಿ ಅವರು ತಿಳಿಸಿದರು.
ಪಕ್ಷದ ಪ್ರಣಾಳಿಕೆಯಲ್ಲಿ 65 ವರ್ಷ ದಾಟಿದ ರೈತರಿಗೆ ಪಿಂಚಣಿ, ಎಲ್ಲ ಜಾತಿ ಜನಾಂಗದ ಮಧ್ಯಮ ವರ್ಗದವರಿಗೂ ತಾವು ಈ ಹಿಂದೆ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಮತ್ತಿತರೆ ಯೋಜನೆಗಳ ವಿಸ್ತರಣೆ, ಮಹಿಳಾ ಸಹಕಾರಿ ಬ್ಯಾಂಕುಗಳ ಸ್ಥಾಪನೆ, ಮುಂದಿನ ಐದು ವರ್ಷಗಳಲ್ಲಿ 224 ವಿಧಾನಸಭೆ ಕ್ಷೇತ್ರಗಳನ್ನು ಸರಿಸಮಾನವಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ಅಂಶಗಳಿರಲಿವೆ ಎಂದು ಹೇಳಿದರು.
ಕೆಜೆಪಿಗೆ ಆನೆಬಲ: ಕೆಜೆಪಿ ಪಕ್ಷಕ್ಕೆ ಜನತಾ ಪರಿವಾರದಲ್ಲಿದ್ದ ಎಲ್ಲ ನಾಯಕರ ಬೆಂಬಲ ದೊರೆಯುತ್ತಿದ್ದು, ಆನೆಬಲ ಬಂದಂತಾಗಿದೆ. ಪಕ್ಷವು 224 ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ನಿಚ್ಚಳ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರು ಭಾರೀ ಸಂಖ್ಯೆಯಲ್ಲಿ ಕೆಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಮುಸ್ಲಿಂ ಸಮಾಜ, ಎಸ್ಸಿ, ಎಸ್ಟಿಗಳಿಗೆ ತಮ್ಮ ಅಧಿಕಾರವಧಿಯಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದ್ದಾಗಿ ತಿಳಿಸಿದ ಅವರು, ಇದುವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಸರ್ಕಾರಗಳು ರಾಜ್ಯದ ಅಭಿವೃದ್ಧಿ ಕಡೆಗಣಿಸಿವೆ ಎಂದು ಟೀಕಿಸಿದರು.
ತೃತೀಯ ರಂಗದತ್ತ ಒಲವು: ರಾಜ್ಯ ವಿಧಾನಸಭೆ ಚುನಾವಣೆಯ ನಂತರದಲ್ಲಿ ದೇಶದಲ್ಲಿ ತೃತೀಯ ರಂಗ ಸ್ಥಾಪನೆಗೆ ತಾವು ಗಮನಹರಿಸುವುದಾಗಿ ತಿಳಿಸಿದ ಯಡಿಯೂರಪ್ಪ, ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಸಂಪರ್ಕಿಸಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ನಡೆಯುವ ಚುನಾವಣೆಯ ವೇಳೆ ತೃತೀಯ ರಂಗ ಅಸ್ತಿತ್ವಕ್ಕೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರದ ಮೇಲೆ ಪ್ರಾದೇಶಿಕ ಪಕ್ಷಗಳು ಹಿಡಿತ ಸಾಧಿಸುವ ಮೂಲಕ ತಮ್ಮ ರಾಜ್ಯಗಳ ಹಿತ ಕಾಪಾಡುತ್ತಿವೆ. ಈ ನಿಟ್ಟಿನಲ್ಲಿ ಕೆಜೆಪಿ ಸಹ ರಾಜ್ಯದಲ್ಲಿ ಬೃಹತ್ ಶಕ್ತಿಯಾಗಿ ಬೆಳೆದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ರಾಜ್ಯದ ಭಾಷೆ, ನೀರು, ಮತ್ತಿತರೆ ವಿಚಾರಗಳಿಗೆ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ, ಪ್ರಮುಖರಾದ ಬಸವರಾಜ ಪಾಟೀಲ್ ಅನ್ವರಿ, ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ, ಮಾನವಿ ಕ್ಷೇತ್ರದ ಅಭ್ಯರ್ಥಿ ಗಂಗಾಧರ ನಾಯಕ್, ಶರಣಪ್ಪಗೌಡ, ಶಶಿರಾಜ್ ಮಸ್ಕಿ ಮತ್ತಿತರರು ಇದ್ದರು.