ಕ್ಯಾದಿಗೇರಾ ಗ್ರಾಮದಲ್ಲಿ ಮದ್ಯ ವ್ಯಸನಿ ಆತ್ಮಹತ್ಯೆ
ರಾಯಚೂರು: ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದಲ್ಲಿ ಮದ್ಯ ವ್ಯಸನಿಯೊಬ್ಬ ಮದ್ಯ ಸೇವನೆಗೆ ಹಣ ನೀಡದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಸುಧೀರ್ ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವನೆಗೆ ತಾಯಿ ಬಳಿ ಹಣ ಕೇಳಿದ್ದು ಆಕೆ ಕೊಡಲು ನಿರಾಕರಿಸಿದಾಗ ಅದರಿಂದ ಬೇಸರಗೊಂಡ ಆತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದೇವದುರ್ಗ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮದ್ಯ ವ್ಯಸನಿ ಸಾವು
ರಾಯಚೂರು: ಸಿಂಧನೂರಿನ ಇಂದಿರಾ ನಗರದ ನಿವಾಸಿಯೊಬ್ಬ ಮದ್ಯದ ಅಮಲಿನಲ್ಲಿಯೇ ಸಾವಿಗೀಡಾಗಿದ್ದಾನೆ. ಮೃತನನ್ನು ದುರುಗಪ್ಪ ಎಂದು ಗುರುತಿಸಲಾಗಿದೆ. ನಗರದ ಎಪಿಎಂಸಿ ಬಳಿ ಮದ್ಯದ ಅತೀಯಾದ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ರಾಯಚೂರು: ದೇವದುರ್ಗ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಹೊಟ್ಟೆನೋವು ತಾಳದೇ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಳನ್ನು ಮರಿಲಿಂಗಮ್ಮ ಎಂದು ಗುರುತಿಸಲಾಗಿದೆ. ಈಕೆ ಕಳೆದ ಕೆಲ ತಿಂಗಳಿನಿಂದ ಮಾನಸಿಕ ಚಿಂತೆ ಮತ್ತು ಆಗಾಗ್ಗೆ ಹೊಟ್ಟೆನೋವು ನಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಬೆಳೆಗೆ ಸಿಂಪಡಿಸಲು ತಂದಿರಿಸಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ದಾಖಲೆ ಕೊರತೆ: ಜಪ್ತಿ
ರಾಯಚೂರು: ಸಿಂಧನೂರು ನಗರಕ್ಕೆ ಕಾರೊಂದರಲ್ಲಿ ಯಾವುದೇ ದಾಖಲೆಗಳಿಲ್ಲದ ಹಣ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು 1.50 ಲಕ್ಷ ಜಪ್ತಿ ಮಾಡಿದ್ದಾರೆ.
ಸಿರುಗುಪ್ಪದಿಂದ ಸಿಂಧನೂರು ಕಡೆಗೆ ಸಾಗುತ್ತಿದ್ದ ಕಾರನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ 1.50 ಲಕ್ಷ ಪತ್ತೆಯಾಗಿದ್ದು ಕಾರು ಚಾಲಕ ರಮೇಶ್ ಎಂಬಾತ ಹಣಕ್ಕೆ ಸಂಬಂಧಿಸಿ ಸೂಕ್ತ ದಾಖಲೆ ಹಾಜರು ಪಡಿಸದಿರುವುದರಿಂದ ಆ ಹಣ ಚುನಾವಣೆಯಲ್ಲಿ ಹಂಚಿಕೆ ಮಾಡಲು ಸಾಗಿಸಲಾಗುತ್ತಿತ್ತೆಂದು ಪೊಲೀಸರು ಶಂಕಿಸಿ ಜಪ್ತಿ ಮಾಡಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.