ನಂಬಿಸಿ ಕೈಕೊಟ್ಟ ಪ್ರಿಯಕರ, ಬೀದಿಗೆ ಬಿದ್ದ ತಾಯಿ, ಮಗು
ಕನ್ನಡಪ್ರಭ ವಾರ್ತೆ,ಸಿಂಧನೂರು,ಏ.7
ಪ್ರಿಯಕರನ ಮೋಸದಿಂದಾಗಿ ವಿವಾಹಿತೆಯೊಬ್ಬಳು ಬೀದಿಗೆ ಬಿದ್ದ ಘಟನೆ ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ವರದಿಯಾಗಿದೆ.
ದಲಿತ ಮಹಿಳೆ ಸಂಜೀವಮ್ಮ(28) ಮೋಸಕ್ಕೆ ಒಳಗಾದ ಮಹಿಳೆ. ತಾಲೂಕಿನ ಯದ್ದಲದೊಡ್ಡಿ ಗ್ರಾಮದ ವಿವಾಹಿತ ವೆಂಕಟರೆಡ್ಡಿ ತಂ. ರಾಮರಡ್ಡಿ ಎನ್ನುವಾತ ವಿವಾಹಿತೆ ದಲಿತ ಮಹಿಳೆ ಸಂಜೀವಮ್ಮನಿಗೆ ಪುಸಲಾಯಿಸಿ ಬೇರೆಡೆಗೆ ಕರೆದುಕೊಂಡು ಹೋಗಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಈ ನಡುವೆ ಇಬ್ಬರಿಗೆ ಶಿವಾನಂದ ಎನ್ನುವ ಮಗು ಕೂಡ ಆಗಿದೆ.
ನಡುದಾರಿಯಲ್ಲಿ ಕೈಕೊಟ್ಟ: ಯಾದಗಿರಿ ಕಡೆಯಿಂದ ಎರಡ್ಮೂರು ದಿನಗಳ ಹಿಂದೆ ಏಕಾಏಕಿ ಊರಿಗೆ ಹೋಗೋಣವೆಂದು ಸಂಜೀವಮ್ಮಳನ್ನು ಕರೆದುಕೊಂಡು ಬಂದ ವೆಂಕಟರೆಡ್ಡಿ ಮಧ್ಯಾಹ್ನದ ಸುಮಾರು ಜವಳಗೇರಿಯ ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಕೆಳಗಿಳಿಸಿದ್ದಾನೆ. ನಂತರ ಮೂತ್ರ ವಿಸರ್ಜಿಸಿ ಬರುವುದಾಗಿ ನಂಬಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ವೆಂಕಟರೆಡ್ಡಿಯ ಬರುವಿಕೆಗಾಗಿ ಸಾಯಂಕಾಲದವರೆಗೂ ಕಾದು ಕಾದು ಸುಸ್ತಾದ ಸಂಜೀವಮ್ಮ ವಿಧಿಯಿಲ್ಲದೆ ಕೊನೆಗೆ ಯದ್ದಲದೊಡ್ಡಿಗೆ ಮರಳಿದ್ದಾಳೆ. ತನ್ನ ಗಂಡನ ಮನೆಗೆ ಹೋದರೆ ಬೇರೆಯವರೊಂದಿಗೆ ನೀನು ಓಡಿ ಹೋಗಿದ್ದೀಯ. ಮನೆಗೆ ಬರಬೇಡ ಎಂದು ಆಕೆಯನ್ನು ಮನೆಯೊಳಗೆ ಕರೆದುಕೊಳ್ಳದೇ ವಾಪಸ್ಸು ಕಳುಹಿಸಿದ್ದಾರೆ. ನಂಬಿಸಿ ಕೈಕೊಟ್ಟ ವೆಂಕಟರೆಡ್ಡಿಯ ಮನೆಗೆ ಹೋದರೆ ಅಲ್ಲಿಯೂ ಆಕೆಗೆ ಬೈಗುಳದ ಮಾತುಗಳು ಕೇಳಿ ಬಂದಿವೆ. ಇದರಿಂದ ಕಂಗಾಲಾದ ಆಕೆ ಕೊನೆಗೆ ಗ್ರಾಮದ ಲಂಕೆಪ್ಪ ತಾತನ ಗುಡಿಯಲ್ಲಿ ಆಶ್ರಯ ಕಂಡುಕೊಂಡಿದ್ದಾಳೆ.
ಸದ್ಯ ದೇಗುಲವೇ ಮನೆ: ಇತ್ತ ಮೊದಲ ಗಂಡನ ಆಶ್ರಯವೂ ಇಲ್ಲ. ಅತ್ತ ನಂಬಿಸಿ ಪುನಃ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ವೆಂಕಟರೆಡ್ಡಿಯ ಆಶ್ರಯವೂ ಇಲ್ಲದೆ ಪರಿತಪಿಸುತ್ತಿದ್ದಾಳೆ. ದೇವಸ್ಥಾನವನ್ನೇ ಮನೆಯನ್ನಾಗಿ ಮಾಡಿಕೊಂಡಿರುವ ಸಂಜೀವಮ್ಮನಿಗೆ ಸುತ್ತಮುತ್ತಲಿನ ಮನೆಯವರು ಸಹಾಯ ಹಸ್ತ ಚಾಚುತ್ತಿದ್ದಾರೆ. ದಿನವೂ ಕಣ್ಣೀರಿನಲ್ಲೇ ಕೈತೊಳೆಯುತ್ತಿರುವ ಸಂಜೀವಮ್ಮ, ಮೋಸವೆಸಗಿ ಪರಾರಿಯಾಗಿರುವ ವೆಂಕಟರಡ್ಡಿಯ ಬಗ್ಗೆ ಆಕ್ರೋಶದಿಂದ ನುಡಿಯುತ್ತಾಳೆ.
ಕ್ರಮಕ್ಕೆ ಒತ್ತಾಯ: ಮಹಿಳೆಗೆ ಆಸೆ ತೋರಿಸಿ ನಂತರ ಮಗುವನ್ನು ಕೊಟ್ಟು ಪರಾರಿಯಾಗುವ ಮೂಲಕ ಆಕೆಯ ಬಾಳಿನಲ್ಲಿ ಆಟ ಆಡಿರುವ ವ್ಯಕ್ತಿಯ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೆ ಆಕೆಗೆ ಮೋಸವೆಸಗಿದ ವ್ಯಕ್ತಿಯಿಂದ ಜೀವನಾಂಶ ಕೊಡಿಸುವ ಮೂಲಕ ಬದುಕಿಗೆ ನೆರವಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.