ನಿರ್ಲಕ್ಷ್ಯ ಖಂಡಿಸಿ ವಿಶ್ವಕರ್ಮ ಸಮಾಜದಿಂದ ಸ್ಪರ್ಧೆ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ತೋರುತ್ತಿರುವ ವಿಳಂಬ ನೀತಿ ಖಂಡಿಸಿ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ವಿಶ್ವಕರ್ಮ ಸಮಾಜದ ಪ್ರಮುಖರು ರಾಜ್ಯದ ವಿವಿಧೆಡೆ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೈ.ಕ. ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಂದ್ರ ಇನಾಮದಾರ್ ತಿಳಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವಶ್ಯಕ ಯೋಜನೆಗಳ ಜಾರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯದ ಧೋರಣೆ ತಾಳಿವೆ. ಇದನ್ನು ಖಂಡಿಸಿ ರಾಜ್ಯದ 16 ವಿಧಾನಸಭೆ ಕ್ಷೇತ್ರಗಳಲ್ಲಿ ವಿಶ್ವಕರ್ಮ ಸಮಾಜದ ಪ್ರಮುಖರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ಹೇಳಿದರು.
ಶತಶತಮಾನಗಳಿಂದ ಕಡೆಗಣನೆ: ಶತ ಶತಮಾನಗಳಿಂದ ದೇಶಕ್ಕೆ ಹಾಗೂ ಮನುಕುಲಕ್ಕೆ ವಿಶ್ವಕರ್ಮ ಸಮಾಜ ಪಂಚ ಕಸುಬುಗಳಿಂದ ಅದ್ಭುತ ಕೊಡುಗೆಯನ್ನು ನೀಡುತ್ತಲೇ ಬಂದಿದೆ. ಅಂಥ ಸಮಾಜವನ್ನು ಕಡೆಗಣಿಸುವ ಕಾರ್ಯವನ್ನು ರಾಜಕೀಯ ಪಕ್ಷಗಳು ಮಾಡಿವೆ. ಸಮಾಜದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಅದರ ತಡೆಗೆ ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸ್ಪರ್ಧೆ ಅನಿವಾರ್ಯ: ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ವಿಶ್ವಕರ್ಮ ಸಮಾಜವನ್ನು ಕಡೆಗಣಿಸಿದ್ದಲ್ಲದೇ ಟಿಕೆಟ್ ನೀಡಿಕೆಯಲ್ಲೂ ನಿರ್ಲಕ್ಷ್ಯಿಸಿವೆ. ಈ ಕಾರಣಕ್ಕೆ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಸಮಾಜದ ಪ್ರಗತಿಗೆ ಸ್ಪರ್ಧೆ ಅನಿವಾರ್ಯ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜತೆಗೂಡಿ ಒಟ್ಟು 16 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿರ್ಧರಿಸಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯವನ್ನು ಸಮಾಜದ ಮುಖಂಡರು ಮಾಡಲಿದ್ದಾರೆ. ರಾಜಕೀಯ ನಾಯಕರ ಕುತಂತ್ರಗಳಿಗೆ ತಕ್ಕ ಉತ್ತರ ನೀಡುವ ಉದ್ದೇಶದಿಂದಲೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಪ್ರಣಾಳಿಯೆಲ್ಲೇನಿದೆ?: ಸಮಾಜದ ಎಲ್ಲರೊಂದಿಗೆ ಚರ್ಚಿಸಿ ಸಮಾಜದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಲಾಗುತ್ತದೆ. ಕುಲಕಸುಬುಗಳ ನಿಗಮ ಸ್ಥಾಪನೆ, ಸಣ್ಣ ಕಸುಬು ಮಾಡಿಕೊಂಡು ಜೀವನ ನಡೆಸುವವರಿಗೆ ಸಾಲ ಸೌಲಭ್ಯ, ಬಯಲುಗಳಲ್ಲಿ ಕುಲಕಸುಬು ಕೈಗೊಳ್ಳುವವರಿಗೆ ಪ್ರತ್ಯೇಕ ಅಂಗಡಿಗಳ ನಿರ್ಮಾಣ, ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ, ಭತ್ಯೆ ಹಾಗೂ ಉಚಿತ ಶಿಕ್ಷಣ ನೀಡಿಕೆ ಸೇರಿದಂತೆ ಅನೇಕ ಅಂಶಗಳನ್ನು ಪ್ರಣಾಳಿಕೆಯಲ್ಲಿವೆ ಎಂದು ತಿಳಿಸಿದರು.
ರಾಯಚೂರು ನಗರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಬ್ರಹ್ಮ ಗಣೇಶ್ ಸ್ಪರ್ಧಿಸಲಿದ್ದಾರೆ. ಸಿಂಧನೂರಿನಲ್ಲಿ ಚಿನ್ಮಯಾಚಾರ್ ಕಣಕ್ಕಿಳಿಯಲಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಕ್ಷೇತ್ರದ ಅಭ್ಯರ್ಥಿ ಬ್ರಹ್ಮ ಗಣೇಶ್ ಮತ್ತಿತರರು ಇದ್ದರು.