ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ: ಡಿಸಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ನೀತಿ ಸಂಹಿತೆ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಎಚ್ಚರಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಸಂಜೆ ಕರೆದಿದ್ದ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಸಮಾರಂಭಗಳನ್ನು ಸಾರ್ವಜನಿಕರು ಆಯೋಜಿಸಬಹುದು. ಆದರೇ ಯಾವುದೇ ಪಕ್ಷಗಳ ಪದಾಧಿಕಾರಿಗಳ, ಜನಪ್ರತಿನಿಧಿಗಳ ಪೋಟೋಗಳನ್ನು ಬ್ಯಾನರ್ ಅಡಿ ಅಳವಡಿಸುವಂತಿಲ್ಲ ಎಂಬುದನ್ನು ಗಮನಿಸಲು ಸೂಚಿಸಿದರು. ಪಕ್ಷದಿಂದ ಈ ಸಮಾರಂಭಗಳಲ್ಲಿ ಯಾವುದೇ ರೀತಿಯ ಭರವಸೆಯಿರುವ ಹೇಳಿಕೆಗಳನ್ನು ನೀಡುವಂತಿಲ್ಲ. ಗ್ರಾಪಂ ಸದಸ್ಯರು ಗ್ರಾಪಂ.ಗಳಲ್ಲಿ ಕುಳಿತು ಯಾವುದೇ ಕಾಮಗಾರಿಗಳ ಬಗ್ಗೆ ಹಾಗೂ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡದಂತೆ ಆದೇಶಿಸಿದರು.
ಯಾವುದೇ ಪಕ್ಷಕದವರು ನೀತಿ ಸಂಹಿತೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ತಕ್ಷಣವೇ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಆ ಬಗ್ಗೆ ವರದಿ ಸಲ್ಲಿಸಬೇಕು. ಗ್ರಾಮಗಳಲ್ಲಿ ಜಾತ್ರೆ ನಡೆಸಬಹುದಾಗಿದೆ. ಸಾಮೂಹಿಕ ಮದುವೆಗಳನ್ನು ಆಯೋಜಿಸಬಹುದು. ಅಂಥ ಸಂದರ್ಭದಲ್ಲಿ ಯಾವುದೇ ಬ್ಯಾನರ್ ಅಳವಡಿಸುವಂತಿಲ್ಲ. ಹಾಗೆಯೇ ಯಾವುದೇ ಪಕ್ಷದ ಇಲ್ಲವೇ ರಾಜಕೀಯ ವ್ಯಕ್ತಿಯ ಹೆಸರು ಬಳಕೆ ಮಾಡದಂತೆ ನಿಗಾ ಇರಿಸಲು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾದಿಕಾರಿ ಎಂ.ತಿಮ್ಮಪ್ಪ, ಸಹಾಯಕ ಆಯುಕ್ತೆ ಎನ್. ಮಂಜುಶ್ರೀ, ಜಿಪಂ ಉಪಕಾರ್ಯದರ್ಶಿ ಎಂ.ಡಿ. ಯೂಸೂಫ್ ಸೇರಿದಂತೆ ಅನೇಕರಿದ್ದರು.