ಬಸವಲಿಂಗ ಶ್ರೀಗಳ ಪುಣ್ಯಸ್ಮರಣೆ; ಇಂದು ಜಾತ್ರಾ ಮಹೋತ್ಸವ
ರಾಯಚೂರು: ಮಾನವಿ ತಾಲೂಕಿನ ಬಲ್ಲಟಗಿ ಹಿರೇಮಠದ ಲಿಂ. ಬಸವಲಿಂಗಯ್ಯ ತಾತನವರ ನಾಲ್ಕನೇ ಪುಣ್ಯತಿಥಿ ಅಂಗವಾಗಿ ಏ. 8ರಂದು ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರು ಹಾಗೂ ಶ್ರೀಮಠದ ಶ್ರೀಗಳಾದ ಬಸವರಾಜಯ್ಯ ತಾತನವರು ತಿಳಿಸಿದ್ದಾರೆ.
ಜಿಲ್ಲೆಯ ಮಾನವಿ ತಾಲೂಕಿನ ಬಲ್ಲಟಗಿ ಹಿರೇಮಠದ ಲಿಂ. ವೇ. ಜಡಿಶಿವಯೋಗಿಗಳು ಮತ್ತು ಲಿಂ.ವೇ. ಗುರುಬಸವ ತಾತನವರೆಂದು ಪ್ರಖ್ಯಾತಿ ಪಡೆದ ಶ್ರೀಮಠದ ವಂಶಸ್ಥರಾಗಿದ್ದ ಲಿಂ.ವೇ. ಬಸವಲಿಂಗಯ್ಯ ತಾತನವರು ಹಿರಿಯರ ಶ್ರೀಗಳ ಆದರ್ಶದಂತೆ ಸಮಾಜದ ಎಲ್ಲ ಜಾತಿ ಜನಾಂಗದವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದರು. ಶ್ರೀಗಳ ಸಮಾಜಮುಖಿ, ನಿಸ್ವಾರ್ಥ ಸೇವೆ ಗುರುತಿಸಿದ ಸದ್ಭಕ್ತರು ಏ.8 ರಂದು ಸೋಮವಾರ ನಾಲ್ಕನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ನವಲಕಲ್ ಬೃಹನ್ಮಠದ ಸೋಮನಾಥ ಶಿವಾಚಾರ್ಯರಿಂದ ರುದ್ರಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುವವು. ನಂತರ ಸಂಜೆ ಶಿವಾನುಭವ ಗೋಷ್ಠಿ ಏರ್ಪಡಿಸಲಾಗಿದ್ದು, ಗೋಷ್ಠಿಯಲ್ಲಿ ನವಲಕಲ್ ಬೃಹನ್ಮಠದ ಸೋಮನಾಥ ಶ್ರೀಗಳು, ಉಟಗನೂರು ಅಡವಿ ಸಿದ್ಧೇಶ್ವರಮಠದ ಮರಿಬಸವಲಿಂಗ ಶ್ರೀಗಳು, ಕೊಡೇಕಲ್ ಗಂಗಾಧರ ಶ್ರೀಗಳು, ಸಿಂಧನೂರು ನಾಮದೇವ ಗೌಡರು ಭಾಗವಹಿಸಲಿದ್ದಾರೆ ಎಂದು ಬಸವರಾಜಯ್ಯ ತಾತನವರು ತಿಳಿಸಿದ್ದಾರೆ.