ಬಸ್- ಜೀಪ್ ಡಿಕ್ಕಿ: ಒಬ್ಬ ಸಾವು, ಇಬ್ಬರಿಗೆ ಗಾಯ
ಕನ್ನಡಪ್ರಭ ವಾರ್ತೆ,ಲಿಂಗಸ್ಗೂರು,ಏ.7
ಪಟ್ಟಣಕ್ಕೆ ಸಮೀಪದ ದೇವನಹಳ್ಳದ ಬಳಿ ಸಾರಿಗೆ ಸಂಸ್ಥೆ ಬಸ್ ಮತ್ತು ಟಾಟಾ ಏಸ್ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ.
ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 19ರ ದೇವನಹಳ್ಳದ ಬಳಿ ಲಿಂಗಸ್ಗೂರು ಪಟ್ಟಣದಿಂದ ಹೊನ್ನಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಟಾಟಾ ಏಸ್ ಹಾಗೂ ಹಟ್ಟಿಯಿಂದ ಲಿಂಗಸ್ಗೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಟಾಟಾ ಏಸ್ ವಾಹನದಲ್ಲಿದ್ದ ಹೊನ್ನಳ್ಳಿ ಗ್ರಾಮದ ಅಮರೇಶ ವೀರಭದ್ರಪ್ಪ ಪೇರಿ (25) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶರಣಬಸವ(28) ಹಾಗೂ ಲಾಲಸಾಬ ಖಾಜಾಸಾಬ(40) ಇವರಿಗೆ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಲಿಂಗಸ್ಗೂರು ಠಾಣೆ ಪೊಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.