ಬಿರುಬಿಸಿಲ ಮಧ್ಯೆ ಅಭ್ಯರ್ಥಿಗಳ ಪ್ರಚಾರ ಭರಾಟೆ ಶುರು
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ಜಿಲ್ಲೆಯಲ್ಲೀಗ ಒಂದೆಡೆ ಬಿರುಬಿಸಿಲ ತಾಪ ದಿನದಿಂದ ದಿನಕ್ಕೆ ಏರತೊಡಗಿದೆ. ಅದೇ ಮತ್ತೊಂದೆಡೆ ವಿಧಾನಸಭೆ ಚುನಾವಣೆಯ ಕಾವೇರುತ್ತಿದೆ. ಟಿಕೆಟ್ ದೊರೆತ ಸಂಭ್ರಮದಲ್ಲಿ ಅಭ್ಯರ್ಥಿಗಳು ಭಾನುವಾರದಿಂದಲೇ ಮತಯಾಚನೆ ಕಾರ್ಯ ಕೈಗೊಂಡಿದ್ದು ಕಂಡುಬಂದಿತು.
ನಗರದಲ್ಲಿ ಭಾನುವಾರ ಬೆಳಗ್ಗೆ ಪಾರಸ್ ಗಾರ್ಡನ್ ಪ್ರದೇಶದ ನಿವಾಸಿಗಳನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ತಿಳಿಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಎಪಿಎಂಸಿ ಅಧ್ಯಕ್ಷ ಆರ್. ತಿಮ್ಮಯ್ಯ ಸೇರಿದಂತೆ ಅನೇಕರಿದ್ದರು.
ಅದೇ ರೀತಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಟಿ ಪೂಜಾ ಗಾಂಧಿ ಅವರು ನಗರದ ಮಾಣಿಕಪ್ರಭು ದೇವಸ್ಥಾನ, ಅಗಾಫೆ ಚರ್ಚ್ ಮತ್ತು ಶಂಶಾಲಂ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮತಯಾಚನೆ ಕಾರ್ಯಕ್ಕೆ ಮುಂದಾದರು.