ಮಹಿಳಾ ಸಬಲೀಕರಣ ಕಾರ್ಯಕ್ರಮ
ರಾಯಚೂರು: ನಗರದ ಬಿಆರ್ಬಿ ಕಾಲೇಜಿನಲ್ಲಿ ಈಚೆಗೆ ಮಹಿಳಾ ಸಬಲೀಕರಣ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಕುಂತಲಾ ಗೋಪಶೆಟ್ಟಿ ಪಾಲ್ಗೊಂಡು ಮಹಿಳಾ ಸಬಲೀಕರಣ-ಸಮಾನ ಅವಕಾಶಗಳು ಹಾಗೂ ಸಕಾರಾತ್ಮಕ ತಾರತಮ್ಯಗಳು ಎಂಬ ವಿಷಯದ ಕುರಿತು ಮಾತನಾಡಿದರು. ಎಲ್ವಿಡಿ ಕಾಲೇಜಿನ ಉಪನ್ಯಾಸಕಿ ಕಮಲಾ ನವರತ್ನ ಭಾಗವಹಿಸಿದ್ದರು. ಪ್ರಾಚಾರ್ಯ ವಿಷ್ಣು ಮಾಸ್ತೆ ಉಪಸ್ಥಿತರಿದ್ದರು.
ನಗರದ ವೈದ್ಯೆ ನೇಹಾ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕಾಲೇಜಿನಲ್ಲಿ ಅಧ್ಯಯನ ಮಾಡಿ ವಿವಿಧ ಪ್ರಮುಖ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಪಾಲ್ಗೊಂಡಿದ್ದರು.
ಕೂಲಿ ದರ ಹೆಚ್ಚಳಕ್ಕೆ ಹಮಾಲರ ಒತ್ತಾಯ
ರಾಯಚೂರು: ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ಕೂಲಿ ಹಮಾಲಿಗಳ ಕೂಲಿ ದರವನ್ನು ಹೆಚ್ಚಿಸವಂತೆ ರಾಯಚೂರು ಎಪಿಎಂಸಿ ಗಂಜ್ ಹಮಾಲರ ಸಂಘ ಆಗ್ರಹಿಸಿದೆ.
ಈ ಕುರಿತು ಇತ್ತೀಚೆಗೆ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಸದ್ಯದ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಕಂಡಿದ್ದು, ಬಡವರಾದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೊಮ್ಮೆ ಕೂಲಿ ದರ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ಆದರೆ ಎಪಿಎಂಸಿ ಆಡಳಿತದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಕ್ಕಂತೆ ಕೂಲಿ ದರವನ್ನು ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ಕೂಡಲೇ ಎಪಿಎಂಸಿ ಅಧಿಕಾರಿಗಳ ಹಾಗೂ ಹಮಾಲರ ಸಂಘದ ಪದಾಧಿಕಾರಿಗಳ ಸಭೆ ಕರೆದು ದರ ಹೆಚ್ಚಳದ ಬಗ್ಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವಂತೆ ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಎಪಿಎಂಸಿ ಆಡಳಿತವು ತನ್ನ ನಿರ್ಧಾರವನ್ನು ಏ. 14ರೊಳಗೆ ಪ್ರಕಟಿಸದಿದ್ದಲ್ಲಿ ಸಂಘದಿಂದ ಹಂತ ಹಂತವಾಗಿ ಉಗ್ರ ಹೋರಾಟ ನಡೆಸುವುದಾಗಿ ಸಂಘದ ಗೌರವಾಧ್ಯಕ್ಷ ವೀರಭದ್ರಪ್ಪ ವಕೀಲರು, ಅಧ್ಯಕ್ಷ ಪ್ರಹ್ಲಾದ ರೆಡ್ಡಿ, ಕಾರ್ಯದರ್ಶಿ ಗಜ್ಜಿ ನರಸಿಂಹಲು ಸೇರಿ ಅನೇಕರು ಎಚ್ಚರಿಸಿದ್ದಾರೆ.