ಪೂಜಾಗಾಂಧಿ ನೋಡಲು ನೂಕು ನುಗ್ಗಲು; ಗೊಂದಲ
ರಾಯಚೂರು: ನಗರ ವಿಧಾನಸಭೆ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ, ನಟಿ ಪೂಜಾಗಾಂಧಿ ಅವರು ಭಾನುವಾರ ಬಿರುಬಿಸಿಲಿನ ಪ್ರಕೋಪಕ್ಕೆ ತತ್ತರಿಸಿದರೆ, ಸೋಮವಾರ ಬೆಳಗ್ಗೆ ಅಭಿಮಾನಿಗಳ ಕೈಗೆ ಸಿಲುಕಿ ಸಂಕಷ್ಟದ ಕ್ಷಣಗಳನ್ನು ಎದುರಿಸುವಂತಾಯಿತು.
ನಗರದ ಹರಿಜನವಾಡ ಪ್ರದೇಶಕ್ಕೆ ಬೆಳಗ್ಗೆ ಧಾವಿಸಿದ ಪೂಜಾ ಗಾಂಧಿ ಅವರ ವಾಹನವನ್ನು ಸುತ್ತುವರಿದ ಅಭಿಮಾನಿಗಳು ಅವರಿಗೆ ಪ್ರಚಾರ ಕೈಗೊಳ್ಳಲು ಅವಕಾಶ ನೀಡದಂತೆ ಬೆನ್ನತ್ತಿದರು. ಅಷ್ಟೇ ಅಲ್ಲ ಈ ವೇಳೆ ಅನೇಕರು ತಮ್ಮ ಮೊಬೈಲ್ಗಳಲ್ಲಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು ಗೊಂದಲಕ್ಕೆ ಕಾರಣವಾಯಿತು.
ಈ ವೇಳೆ ನಟಿ ಪೂಜಾ ಗಾಂಧಿ ಅವರಿಗೆ ಹಸ್ತಲಾಘವ ನೀಡಲು ಮಹಿಳೆಯರು, ಮಕ್ಕಳು, ಯುವಕರು ತೊಡಗಿದ್ದು, ಮತ್ತಷ್ಟು ಗೊಂದಲವನ್ನು ಹೆಚ್ಚಿಸಿತು. ಸ್ಥಳದಲ್ಲಿದ್ದ ಪೊಲೀಸರು ಜನರ ನಿಯಂತ್ರಿಸಲಾಗದೇ ಸೋತರೆ, ಪಕ್ಷದ ನಾಯಕರು ಜನಜಂಗುಳಿಯನ್ನು ನಿಯಂತ್ರಿಸಲಾಗದೇ ಪರದಾಡಿದರು.
ಈ ಗೊಂದಲದ ಮಧ್ಯೆಯೂ ನಟಿ ಪೂಜಾ ಗಾಂಧಿ ಕೆಲವರಿಗೆ ಆಟೋಗ್ರಾಫ್ ನೀಡಿದರೆ ಮತ್ತೆ ಕೆಲವರಿಗೆ ಹಸ್ತಲಾಘವ ನೀಡಿ ಮತಯಾಚಿಸಿ ಅಲ್ಲಿಂದ ತೆರಳಿದರು.