ಬಿಜೆಪಿಯವರ ಪತ್ರಿಕಾಗೋಷ್ಠಿಯೂ.... ಹನುಮೇಶ ನಾಯಕರ ರಾಜಿನಾಮೆಯೂ...
ಕನ್ನಡ ಪ್ರಭವಾರ್ತೆ, ಸಿಂಧನೂರು, ಏ.8
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಶಿವನಗೌಡರ ನಿವಾಸದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.
ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ಬಿಜೆಪಿ ಎಸ್ಟಿ ಮೊರ್ಚಾ ಘಟಕದ ಅಧ್ಯಕ್ಷ ಹನುಮೇಶ ನಾಯಕ ಹರೇಟನೂರ ರಾಜಿನಾಮೆಯ ಸುದ್ದಿ ಕೆಲ ಕಾರ್ಯಕರ್ತರು ಹಾಗೂ ಮುಖಂಡರ ಮಧ್ಯೆ ಗುಸುಗುಸು ಚರ್ಚೆ ಹಾಗೂ ರಾಜಿನಾಮೆ ಪತ್ರ ಬಿಜೆಪಿ ಅಭ್ಯರ್ಥಿ ಸೇರಿದಂತೆ ಅನೇಕ ಮುಖಂಡರ ಕೈಗಳಲ್ಲಿ ಓಡಾಡಿತು.
ಈ ಬಗ್ಗೆ ಅನುಮಾನಗೊಂಡ ಪತ್ರಕರ್ತರು ರಾಜಿನಾಮೆ ಕುರಿತು ಪ್ರಶ್ನಿಸಿದಾಗ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಪಕ್ಷಕ್ಕೆ ರಾಜಿನಾಮೆ ನೀಡುವುದಿಲ್ಲ. ಇದೆಲ್ಲಾ ಬರಿ ವದಂತಿ ಎಂದು ತೇಪೆ ಹಾಕಲು ಪ್ರಯತ್ನಿಸಿದರು.
ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಪತ್ರಕರ್ತರು ಹೋಗುವವರೆಗೆ ಸುಮ್ಮನಿರಿ. ನಂತರ ಚರ್ಚಿಸೋಣ ಎಂದು ಮುಖಂಡರು ಮಾತನಾಡಿಕೊಳ್ಳುವುದು ಪತ್ರಕರ್ತರ ಕಿವಿಗೆ ಬಿತ್ತು. ಮುಖಂಡರೆಲ್ಲಾ ಚರ್ಚಿಸಿ ನಾಯಕರ ಕೈಯಲ್ಲಿದ್ದ ರಾಜಿನಾಮೆ ಪತ್ರದ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಅಲ್ಲಿಯೇ ಸುಟ್ಟು ಹಾಕಿದರೆಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿದವು. ಆದರೆ ಹನುಮೇಶ ನಾಯಕರೆ ಪತ್ರಿಕಾಗೋಷ್ಠಿ ಮುಗಿದ ಹತ್ತು ನಿಮಿಷಗಳಲ್ಲಿ ಪತ್ರಕರ್ತರಿಗೆ ಪುನಃ ಅದೇ ರಾಜಿನಾಮೆ ಪತ್ರಕ್ಕೆ ಸಹಿಮಾಡಿ ಸುದ್ದಿ ಹಾಕುವಂತೆ ವಿನಂತಿಸಿ ಕೊಟ್ಟು ಹೋದರು.
ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ, ಪಂಗಡಗಳಿಲ್ಲ, ತಮ್ಮದು ಶಿಸ್ತಿನ ಪಕ್ಷ ಎಂದು ಸದಾ ಕಾಲ ಹೇಳುವ ಹಿರಿಯ ಮುಖಂಡರುಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.
ಬೈ... ಬೈ... ಗುಡ್ಬೈ
ಸಿಂಧನೂರು: ತಾಲೂಕಾ ಬಿಜೆಪಿ ಎಸ್ಟಿ ಮೋರ್ಚಾ ಘಟಕದ ಅಧ್ಯಕ್ಷ ಹನುಮೇಶ ನಾಯಕ ಹರೇಟನೂರಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ನಗರಸಭೆ ಚುನಾವಣೆಯಲ್ಲಿ ವಾರ್ಡಾ ನಂ.31 ರಲ್ಲಿ ತಾವು ಸೂಚಿಸಿದ ಅಭ್ಯರ್ಥಿ ಕೇವಲ 30 ಮತಗಳನ್ನು ಪಡೆದಿದ್ದಕ್ಕೆ ಹಾಗೂ 21 ವಾರ್ಡ್ ಸೇರಿ ಪಕ್ಷ ಕೇವಲ 1192 ಮತಗಳನ್ನು ಪಡೆದಿರುವುದಕ್ಕೆ ಮನನೊಂದು ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಾಲೂಕಿನ ಮುಖಂಡರಿಗೆ ಹಲವಾರು ಬಾರಿ ಮೌಖಿಕವಾಗಿ ಹೇಳಿದ್ದೆ. ಚುನಾವಣೆ ಸಮಯ ಇರುವುದರಿಂದ ರಾಜಿನಾಮೆ ಕೊಡುವುದು ಬೇಡವೆಂದು ತಿಳಿಸಿದ್ದರು ಎಂದರು.
--