ರು. 11.80 ಲಕ್ಷ ಚುನಾವಣೆ ಅಕ್ರಮ ಹಣ ಪತ್ತೆ: ಹಲವರ ಬಂಧನ
ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚುನಾವಣೆಯ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಟ್ಟು ರು. 11.80ಲಕ್ಷ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡು, ಐವರನ್ನು ಬಂಧಿಸಿದ್ದಾರೆ.
ನಗರದ ನವೋದಯ ಮೆಡಿಕಲ್ ಕಾಲೇಜ್ ಬಳಿಯ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸೋಮವಾರ ಬೆಳಗ್ಗೆ ಪ್ರಕಾಶ್ ಎಂಬಾತನಿಂದ ದಾಖಲೆಗಳಿಲ್ಲದೇ ಕೊಂಡೊಯ್ಯುತ್ತಿದ್ದ ರು. 50 ಸಾವಿರ ಜಪ್ತಿ ಮಾಡಿ ಆತನನ್ನು ಬಂಧಿಸಿದ್ದಾರೆ. ಅದೇ ರೀತಿ ಮಧ್ಯಾಹ್ನ ಅದೇ ಸ್ಥಳದಲ್ಲಿ ಸ್ಕಾರ್ಪಿಯೋದಲ್ಲಿ ಸಾಗಿಸುತ್ತಿದ್ದ ರು. 5.70ಲಕ್ಷವನ್ನು ಜಪ್ತಿ ಮಾಡಿ ರಂಗಪ್ಪ ಎಂಬಾತನನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಸಿಂಧನೂರು ನಗರಕ್ಕೆ ಬೆಳಗ್ಗೆ ಧಾವಿಸುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದ ಪೊಲೀಸರಿಗೆ ದಾಖಲೆಗಳಿಲ್ಲದ ರು. 5.60ಲಕ್ಷ ಹಣ ಪತ್ತೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್, ಅಬ್ದುಲ್ ಹಾಗೂ ಮಹ್ಮದ್ ರಫೀ ಎಂಬುವವರನ್ನು ಬಂಧಿಸಲಾಗಿದೆ. ಈ ಕುರಿತು ರಾಯಚೂರಿನ ನೇತಾಜಿ ನಗರ ಮತ್ತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ