12ರಿಂದ ಮಾಧವತೀರ್ಥರ ಆರಾಧನಾ ಮಹೋತ್ಸವ
ರಾಯಚೂರು: ಲಿಂಗಸ್ಗೂರು ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಏ.12ರಿಂದ 16ರವರೆಗೆ ಮಾಧವತೀರ್ಥರ 203ನೇ ಆರಾಧನಾ ಪಂಚರಾತ್ರೋತ್ಸವ ಸಮಾರಂಭ ಆಯೋಜಿಸಲಾಗಿದೆ.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಣ್ವ ಮಠದ ಮಠಾಧೀಶರಾದ ವಿದ್ಯಾಭಾಸ್ಕರತೀರ್ಥರು ಈ ವಿಷಯ ತಿಳಿಸಿ, ಆರಾಧನಾ ಮಹೋತ್ಸವದ ಅಂಗವಾಗಿ ಹಯಗ್ರೀವ ಜ್ಞಾನಯಜ್ಞ ತಥಾ ಲಕ್ಷ್ಮಿನಾರಾಯಣ ಹವಿರ್ಯಜ್ಞಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧೆಡೆಯ ವಿದ್ವಾಂಸರಾದ ಕೃಷ್ಣ ಪುರಾಣಿಕ, ಡಾ. ದಿವಾಕರ ಮಹಾಪಾತ್ರ ಜಗನ್ನಾಥ್, ಜೋತಿರ್ವಿದ್ವಾನ್ ಸುಧೀಂದ್ರ ಜೋಯಿಸ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಹೋಮ, ಪೂರ್ಣಾಹುತಿ: ಏ.12ರಿಂದ 15ರವರೆಗೆ ದಿನವೂ ಬೆಳಗ್ಗೆ 7ಕ್ಕೆ ಹೋಮಗಳು, ಪಾರಾಯಣ, ಜಪ,ತಪ, ಹೋಮಗಳ ಪೂರ್ಣಾಹುತಿ, ಮಾಧವತೀರ್ಥರ ಹಾಗೂ ಯಾಜ್ಞಾವಲ್ಕ್ಯರ ಅಷ್ಟೋತ್ತರ ಪಾರಾಯಣ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.
ದಾಸವಾಣಿ: ಬೆಳಗ್ಗೆ 8ಕ್ಕೆ ಕಣ್ವಮಠ ಸಂಸ್ಥಾನ ಪೂಜೆ, ಬೆಳಗ್ಗೆ 11.30ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 5ರಿಂದ 8.30ರವರೆಗೆ ವಿದ್ವತ್ ಸಭಾ, ರಾತ್ರಿ 9ರಿಂದ 11ರವರೆಗೆ ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಏ.13ರಂದು ಬೆಳಗ್ಗೆ 9ಕ್ಕೆ ವಿದ್ವತ್ ಸಭಾ ಉದ್ಘಾಟನೆ ನಡೆಯಲಿದೆ. ಏ.14ರಂದು ಮಹಿಳಾ ಸಭೆ, ಡಾ.ಮುದ್ದುಮೋಹನ್ ಅವರಿಂದ ದಾಸವಾಣಿ ಕಾರ್ಯಕ್ರಮ, ಏ.15ರಂದು ಪ್ರತಿಭಾ ಪುರಸ್ಕಾರ, ಅತಿಥಿಗಳಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದು, ಎಲ್ಲರೂ ಪಾಲ್ಗೊಂಡು ಶ್ರೀಮಾಧವತೀರ್ಥರ ಕೃಪೆಗೆ ಪಾತ್ರರಾಗಲು ಅವರು ಕೋರಿದರು.