ಗುಡಿಸಲಿಗೆ ಬೆಂಕಿ: ಕುಟುಂಬ ಬೀದಿ ಪಾಲು
ಮುದಗಲ್: ಪಟ್ಟಣದ ವಾರ್ಡ್ ನಂ.3ರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮವಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜರುಗಿದೆ. ತಿರುಮಲ್ತಂ ಸತ್ಯನಾರಾಯಪ್ಪ ಹಡಪದ ಎನ್ನುವವರ ಗುಡಿಸಲು ಸುಟ್ಟಿದೆ. ಗುಡಿಸಲಲ್ಲಿ ಅಕ್ಕಿ, ಜೋಳ, ರು. 50 ಸಾವಿರ ಬೆಲೆ ಬಾಳುವ ಸಾಮಾನುಗಳು, ರು. 25 ಸಾವಿರ ನಗದು, 10 ಗ್ರಾಮ ಚಿನ್ನದ ಆಭರಣಗಳು ಸುಟ್ಟು ಕರಕಲಾಗಿವೆ.
ಗುಡಿಸಲು ಸುಟ್ಟು ಕರಕಲಾಗಿದ್ದರಿಂದ ಕುಟುಂಬದವರು ಬೀದಿ ಪಾಲಾಗಿದ್ದಾರೆ. ಅಕಸ್ಮಿಕ ಬೆಂಕಿ ತಗುಲಿ ಆಸ್ತಿ ನಷ್ಟವಾಗಿದ್ದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಬೆಂಕಿ ನಂದಿಸಲು ಲಿಂಗಸ್ಗೂರಿನಿಂದ ಅಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿತ್ತು.