ಸನ್ಮಾನ ಸಮಾರಂಭ (ಸಂಕ್ಷಿಪ್ತ ಸುದ್ದಿ )
ರಾಯಚೂರು: ನಗರದ ನೌಕರರ ಭವನದಲ್ಲಿ ಈಚೆಗೆ ಜಿಲ್ಲಾ ಮಟ್ಟದ ಅಂಗವಿಕಲ ನೌಕರರ ಸಂಘದ ಸಭೆ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬಹುದಿನಗಳ ಹೋರಾಟದ ನಂತರದಲ್ಲಿ ಸಂಘದ ಬೇಡಿಕೆಗಳಾದ ಅಂಗವಿಕಲ ನೌಕರರ ಸಂಘವು ವೃಂದ ಸಂಘವಾಗಿರದೇ ಎಲ್ಲ ಇಲಾಖೆಯ ನೌಕರರನ್ನೊಳಗೊಂಡ ಮಾತೃ ಸಂಘವಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಸಂಘವಾಗಿದೆ. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಪರಿಗಣಿಸುವಂತೆ ಅಂಗವಿಕಲ ನೌಕರರ ಸಂಘವನ್ನೂ ಪರಿಗಣಿಸಲು ಒಪ್ಪಿಗೆ ದೊರೆತಿದೆ ಎಂದು ಹೇಳಿದರು. ಪ್ರತಿ ಡಿಸೆಂಬರ್ನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಅಂಗವಿಕಲ ದಿನಾಚರಣೆ ಆಯೋಜನೆ ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ನೀಡಿಕೆ ಆರಂಭವಾಗಿದ್ದು, ಡಿಸೆಂಬರ್ ನಲ್ಲಿ ರಾಯಚೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಲು ಅವರು ಮನವಿ ಮಾಡಿದರು. ಸಂಘದ ರಾಜ್ಯ ನಿರ್ದೇಶಕ ಕರಿಯಪ್ಪ, ಜಿಲ್ಲಾಧ್ಯಕ್ಷ ಜಗದೇವಪ್ಪ, ಉಪಾಧ್ಯಕ್ಷ ಆಂಜನೇಯಲು ಇದ್ದರು.
13ರಿಂದ ಶಿಬಿರ
ರಾಯಚೂರು: ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಏ.13ರಿಂದ ಏ.19 ರವರೆಗೆ ಬ್ರಾಹ್ಮಣ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಬೇಸಿಗೆಯ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ. ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ದಿನವೂ ಬೆಳಗ್ಗೆ 5.30ರಿಂದ 10.30ರವರೆಗೆ ನಡೆಯುವ ತರಬೇತಿಯಲ್ಲಿ ಸಂಧ್ಯಾ ವಂದನೆ, ಶ್ಲೋಕ ಪಠಣ, ಸಂಗೀತ, ಚೆಸ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ವಿವರಕ್ಕೆ 94497 61975 ಸಂಪರ್ಕಿಸಬಹುದು.