ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

1,549 ಮತಗಟ್ಟೆ ಸ್ಥಾಪನೆ

Vishwanath S
Updated On : 10 Apr 2013, 11:00 am

ಕನ್ನಡಪ್ರಭ ವಾರ್ತೆ,ರಾಯಚೂರು, ಏ.10
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಎಲ್ಲ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಏ. 10ರಿಂದ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭಗೊಂಡಿದೆ. ಮತದಾನಕ್ಕಾಗಿ 1,549 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ತಿಳಿಸಿದರು.
ನಗರದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನಾಮಪತ್ರಗಳ ಸಲ್ಲಿಕೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸ್ಪರ್ಧಾಳುಗಳಿಗೆ ನಾಮಪತ್ರ ಸಲ್ಲಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
17ರಂದು ನಾಮಪತ್ರ ಪರಿಶೀಲನೆ: ನಾಮಪತ್ರ ಸಲ್ಲಿಕೆ ಕಾರ್ಯ ಏ. 10ರಿಂದಲೇ ಆರಂಭಗೊಂಡಿದ್ದು, ಏ.11 ಮತ್ತು ಏ.14 ಹೊರತುಪಡಿಸಿ ಉಳಿದ ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಬಹುದಾಗಿದೆ. ಏ.17ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏ.20 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ ಎಂದು ಹೇಳಿದರು.
ಅಭ್ಯರ್ಥಿಗಳು ತಮ್ಮ ಆಸ್ತಿ ಮತ್ತಿತರೆ ವಿವರಗಳಿರುವ ಅಫಿಡವಿಟ್ ಎಲ್ಲ ರೀತಿಯಿಂದ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳಬೇಕು. ನಾಮಪತ್ರದೊಂದಿಗೆ ಸಲ್ಲಿಕೆಯಾಗುವ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ. ಪೂರ್ಣ ಪ್ರಮಾಣದ ಮತದಾನಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
1,549 ಮತಗಟ್ಟೆ ಸ್ಥಾಪನೆ: ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಗೆ ಒಟ್ಟು 1,549 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಯಚೂರು ನಗರ ಕ್ಷೇತ್ರದಲ್ಲಿ 192 ಮತಗಟ್ಟೆ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 221, ಮಾನವಿ ಕ್ಷೇತ್ರದಲ್ಲಿ 235, ದೇವದುರ್ಗ ಕ್ಷೇತ್ರದಲ್ಲಿ 228, ಲಿಂಗಸ್ಗೂರು ಕ್ಷೇತ್ರದಲ್ಲಿ 236 ಮತಗಟ್ಟೆಗಳು, ಸಿಂಧನೂರು ಕ್ಷೇತ್ರದಲ್ಲಿ 233 ಹಾಗೂ ಮಸ್ಕಿ ಕ್ಷೇತ್ರದಲ್ಲಿ 204 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಒಟ್ಟು 12,93,251 ಮತದಾರರು: ಪ್ರಸಕ್ತ ವರ್ಷದ ಜ.16ರ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 12,93,251 ಮತದಾರರಿದ್ದು, ಅದರಲ್ಲಿ 6,50,987 ಪುರುಷರು ಹಾಗೂ 6,42,264 ಮಹಿಳಾ ಮತದಾರರಿದ್ದಾರೆ. ಈ ಮತದಾರರ ಸಂಖ್ಯೆಯು ಇತ್ತೀಚೆಗೆ ಪೂರ್ಣಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಹೆಚ್ಚಳ ಕಾಣಲಿದೆ ಎಂದು ಹೇಳಿದರು.
17ರಂದು ಮತದಾರರ ಪರಿಷ್ಕೃತ ಪಟ್ಟಿ: ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಏ.7ಕ್ಕೆ ಕೊನೆಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹೊಸದಾಗಿ ಮತ್ತು ಬಿಟ್ಟುಹೋದ ಮತದಾರರ ಹೆಸರುಗಳ ಸೇರ್ಪಡೆಗೆ ಒಟ್ಟು ಸುಮಾರು 50 ಸಾವಿರ ಅರ್ಜಿಗಳು ಬಂದಿವೆ. ಅದೇ ರೀತಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸುಮಾರು 15 ಸಾವಿರಕ್ಕೂ ಹೆಚ್ಚಿನ ಅರ್ಜಿ ಬಂದಿವೆ. ಏ.17ಕ್ಕೆ ಮತದಾರರ ಪರಿಷ್ಕೃತ ಪಟ್ಟಿ ಮತದಾರರಿಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ವೀಕ್ಷಕರ ನೇಮಕ: ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾಯಿರಿಸಲು ವೀಕ್ಷಕರನ್ನು ನೇಮಿಸಿದ್ದು, ವೀಕ್ಷಕರಾದ ಆರ್.ಬಿ. ಶಿಂಧೆ ಅವರು ದೇವದುರ್ಗ ಮತ್ತು ಮಾನವಿ ಕ್ಷೇತ್ರ, ವಿ.ಕೆ.ಸಿಂಗ್ ಅವರು ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರ ಹಾಗೂ ಸಾಯಿಸರಣ್ ಅವರು ಲಿಂಗಸ್ಗೂರು, ಮಸ್ಕಿ ಮತ್ತು ಸಿಂಧನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮಾಡುವ  ವೆಚ್ಚಗಳ ಮೇಲೆ ನಿಗಾಯಿರಿಸಲಿದ್ದಾರೆಂದು ತಿಳಿಸಿದರು.
ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ ಕಾರ್ಯ ಜಾರಿಯಲ್ಲಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಚುನಾವಣೆಯ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement