'ಕೈ'ಗೆ ಅಧಿಕಾರ ಸಿಕ್ಕರೆ ಸಮಸ್ಯೆ ಪರಿಹಾರ
ಕನ್ನಡಪ್ರಭ ವಾರ್ತೆ,ಸಿಂಧನೂರು,ಏ.10
ಸದಾ ಬಡವರ್ಗದವರ ಹಿತದೃಷ್ಟಿಯಿಂದ ಸೇವೆಗೈಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮತದಾರರು ಅಧಿಕಾರಕ್ಕೆ ತಂದರೆ ಎಲ್ಲರ ಸಮಸ್ಯೆಗಳಿಗೆ ಸ್ಪಂದನೆ ದೊರೆಯಲಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಜನತೆ ಬೇಸತ್ತಿದ್ದು ರಾಜ್ಯಾದ್ಯಂತ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ. ಕ್ಷೇತ್ರದ ಮತದಾರರು ಸಹ ಅವಕಾಶ ನೀಡುವಂತೆ ಮನವಿ ಮಾಡಿದರು.
ಜಾತ್ಯತೀತ ಚುನಾವಣೆ ನಡೆಯಲಿ: ಕಬ್ಬೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯಿಂದ ಅಭಿವೃದ್ಧಿ ನಿರೀಕ್ಷಿಸಿದ್ದ ಜನತೆಗೆ ಬರೀ ಭ್ರಷ್ಟಾಚಾರವನ್ನೇ ಕಣ್ಣು ತುಂಬಿಕೊಳ್ಳುವಂತಾಯಿತು. ಪ್ರಮುಖರೆಲ್ಲರೂ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಜೈಲು ಪಾಲಾದರು. ಬಿಜೆಪಿ ಒಡೆದಮನೆಯಾಗಿದ್ದು, ಪಕ್ಷ ಜನತೆಯ ಆಶೋತ್ತರಕ್ಕೆ ಸ್ಪಂದಿಸದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಶೋಷಿತರೆಲ್ಲರೂ ಕಾಂಗ್ರೆಸ್ಗೆ ಬೆಂಬಲಿಸುವ ಲಕ್ಷಣಗಳಿವೆ. ಬರೀ ಒಂದು ಸಮುದಾಯದಿಂದ ಅಧಿಕಾರ ನಡೆಸುವುದು ಅಸಾಧ್ಯ. ಜಾತ್ಯತೀತ ಚುನಾವಣೆಯಾಗಬೇಕು ಎಂದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ: ಮುಖಂಡ ಕಾಳಿಂಗಪ್ಪ ವಕೀಲ ಮಾತನಾಡಿ, ಸಮೀಕ್ಷೆಯ ಪ್ರಕಾರ ಈ ಬಾರಿ ಕಾಂಗ್ರೆಸ್ ಅಧಿಕಾರಿ ಹಿಡಿಯಲಿದೆ. ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ ಅಥವಾ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವ ಸೂಚನೆಗಳು ಕಾಣುತ್ತಿವೆ. ಕಾರಣ ಕಾರ್ಯಕರ್ತರು ಮೇ 5ರ ವರೆಗೆ ಉತ್ಸಾಹದಿಂದ ಇದ್ದು ಹಂಪನಗೌಡರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಮುಖಂಡರಾದ ಎನ್.ಶಿವನಾಗಪ್ಪ, ವಿರುಪಾಕ್ಷಪ್ಪ, ಎಸ್.ಲಿಂಗರಾಜ, ಎನ್.ಭೀಮನಗೌಡ ಗೊರೇಬಾಳ, ತಿಮ್ಮಯ್ಯನಾಯಕ, ಎಸ್.ವೀರೇಶಪ್ಪ ಸೂಗೂರು, ಜಾಫರ ಜಾಗೀರದಾರ, ಪಂಪನಗೌಡ ಬಾದರ್ಲಿ, ಮಲ್ಲಿಕಾರ್ಜುನಗೌಡ ಬೆಳಗುರ್ಕಿ, ಶಿವಕುಮಾರಜವಳಿ, ಜಿಪಂ ಸದಸ್ಯರಾದ ಶಿವನಗೌಡ ಎಲೆಕೂಡ್ಲಿಗಿ, ಚಂದೂಸಾಬ ಮುಳ್ಳೂರು, ಎಪಿಎಂಸಿ ಸದಸ್ಯ ಚನ್ನಬಸವ, ತಾಪಂ ಸದಸ್ಯ ಇ.ಸುಬ್ಬಾರಾವ್ ಮತ್ತಿತರರು ಪಾಲ್ಗೊಂಡಿದ್ದರು.
ಸೇರ್ಪಡೆ: ಇದೇ ವೇಳೆ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಗೊರೇಬಾಳ ಹಾಗೂ ಹುಡಾ, ಚನ್ನಳ್ಳಿ, ಸಿದ್ರಾಂಪುರ, ಉಪ್ಪಳ, ಸಿಂಗಾಪುರ, ಗೋನವಾರ, ಆರ್.ಎಚ್. ಕ್ಯಾಂಪ್, ಬೂತಲದಿನ್ನಿ, ಗಾಂಧಿನಗರ ಹಾಗೂ ನಗರ ಪ್ರದೇಶದ ನೂರಾರು ಮತದಾರರು ಪಕ್ಷಕ್ಕೆ ಸೇರ್ಪಡೆಗೊಂಡರು.