ಕ್ಯಾಟರಿಂಗ್, ಸಪ್ಲೈಯರ್ಸ್‌ಗೆ ಸೂಚನೆ
ರಾಯಚೂರು: ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾಟರಿಂಗ್ ಮತ್ತು ಖಾನಾವಳಿ ಸೇವೆ ಒದಗಿಸುವವರು ಸಾಮೂಹಿಕ ಊಟದ ವ್ಯವಸ್ಥೆ ಮಾಡದಂತೆ ಸಹಾಯಕ ಆಯುಕ್ತೆ ಎನ್. ಮಂಜುಶ್ರೀ ಸೂಚಿಸಿದ್ದಾರೆ.
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಶ್ಯಾಮಿಯಾನಾ, ಸೌಂಡ್ ಸಿಸ್ಟಂ ಸರಬರಾಜುದಾರರು ಯಾವುದೇ ಸೇವೆಗಳನ್ನು ನೀಡುವ ಮುನ್ನ ಶಾಸನಬದ್ಧ ಸಂಸ್ಥೆಯಿಂದ ಪರವಾನಗಿ ಪಡೆಯಬೇಕು. ಹಳದಿ ಬೋರ್ಡುಗಳುಳ್ಳ ಆಟೋ, ಕಾರು, ಜೀಪು ಮತ್ತು ಬಸ್ಸುಗಳ ಮಾಲೀಕರು ತಮ್ಮ ವಾಹನಗಳನ್ನು ಚುನಾವಣೆ ಕಾರ್ಯಗಳಿಗೆ ಬಳಕೆ ಮಾಡುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕೆಂದು ಸೂಚಿಸಿದ್ದಾರೆ. ಈ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಸರಬರಾಜುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.