ಪ್ರಾಮಾಣಿಕರ ಆಯ್ಕೆಗೆ ಮತದಾನ ಅಗತ್ಯ: ಸಿಇಒ
ಕನ್ನಡಪ್ರಭ ವಾರ್ತೆ,ರಾಯಚೂರು, ಏ.10
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಪ್ರಾಮಾಣಿಕರ ಆಯ್ಕೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾತದಾನ ಮಾಡುವುದು ಅವಶ್ಯ ಎಂದು ಜಿಪಂ ಸಿಇಒ ಜ್ಞಾನಪ್ರಕಾಶ ಕರೆ ನೀಡಿದರು.
ನಗರದಲ್ಲಿ ಬುಧವಾರ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆಯಲ್ಲಿ ಶೇ.100ರಷ್ಟು ಮತದಾನದ ಗುರಿ ಸಾಧನೆ ಹಿನ್ನೆಲೆ ಯುನಿಸೆಫ್ ಮಕ್ಕಳ ಸಂರಕ್ಷಣೆ ಯೋಜನೆಯ ಘಟಕ ಮತ್ತು ಬಾಲಿಕಾ ಸಂಘದ ಸದಸ್ಯರಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿರಾಸಕ್ತಿ ಸರಿಯಲ್ಲ: ಪ್ರತಿ ಬಾರಿ ನಡೆಯುವ ಚುನಾವಣೆಗಳಲ್ಲಿ ಎಲ್ಲ ಮತದಾರರು ಮತದಾನದ ಹಕ್ಕು ಚಲಾಯಿಸುತ್ತಿಲ್ಲ. ಅದರಿಂದಾಗಿ ಸಮರ್ಥ ಹಾಗೂ ಪ್ರಾಮಾಣಿಕ ನಾಯಕರು ಆಯ್ಕೆಯಾಗುತ್ತಿಲ್ಲ. ಐದು ವರ್ಷಗಳ ಕಾಲ ನಮ್ಮ ದೇಶ ಮತ್ತು ರಾಜ್ಯವನ್ನು ಆಳುವಂಥ ನಾಯಕರ ಆಯ್ಕೆಗೆ ಮತದಾರರು ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ ಎಂದು ತಿಳಿ ಹೇಳಿ ಈ ನಿಟ್ಟಿನಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಎಲ್ಲ ಮತದಾರರು ಮತದಾನ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಅನೇಕ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಶೇ. 50ರ ಆಸುಪಾಸಿನಲ್ಲಿದೆ. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರಿದ್ದು, ಅವರ ಮೇಲೆಯೇ ಮತದಾನದ ಪ್ರಮಾಣ ಕುಸಿತದ ಹೊಣೆ ಹೊರಿಸುವುದು ಸರಿಯಲ್ಲ. ನಗರ ಪ್ರದೇಶದ ಜನರೂ ಮತದಾನ ಮಾಡಲು ಮುಂದೆ ಬರುತ್ತಿಲ್ಲ ಎಂಬುದು ಅಷ್ಟೇ ಸತ್ಯ ಎಂದು ಹೇಳಿದರು.
ನಗರವಾಸಿಗಳೇ ಹಿಂದೇಟು: ಮತದಾನಕ್ಕೆ ಗ್ರಾಮೀಣ ಪ್ರದೇಶದವರಿಗಿಂತ ನಗರ ಪ್ರದೇಶದಲ್ಲಿಯೇ ಹೆಚ್ಚಿನ ನಿರಾಸಕ್ತಿ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಮತದಾನದ ಮಹತ್ವ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಚುನಾವಣೆ ಆಯೋಗವು ಈ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮ ಜಾರಿ ಮೂಲಕ ಶೇ.100ರಷ್ಟು ಮತದಾನ ಸಾಧ್ಯವಾಗಿಸಲು ಪ್ರಾಮಾಣಿಕವಾಗಿ ಜಾಗೃತಿ ಕಾರ್ಯಕ್ರಮ ಜಾರಿಗೆ ತರಲು ಸೂಚಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವಂತೆ ಮಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಜಾಗೃತಿ ಮೂಡಿಸಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ ನಾಯಕ ಮಾತನಾಡಿ, ಆಯೋಗದ ಸೂಚನೆಯಂತೆ ಪೂರ್ಣ ಪ್ರಮಾಣದ ಮತದಾನ ಸಾಧ್ಯವಾಗಲು ಎಲ್ಲ ಇಲಾಖೆಗಳ ಸಿಬ್ಬಂದಿ ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೋಹಿಣಿ ಹಿರೇಮಠ, ಜನಚೇತನ ಸಂಸ್ಥೆ ಸಂಚಾಲಕ ಕಿಶನ್‌ರಾವ್, ಯುನಿಸೆಫ್ ಮಕ್ಕಳ ಸಂರಕ್ಷಣೆ ಯೋಜನೆಯ ಮಂಜುನಾಥ ರೆಡ್ಡಿ, ಅಜಿತ್ ಕುಮಾರ, ಬಾಲಿಕಾ ಸಂಘದ ಸದಸ್ಯೆಯರು ಇದ್ದರು.
ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಯುವ ಮತದಾರರು ಸಮಾರಂಭದಲ್ಲಿದ್ದರು.