ಮತದಾರರ ಜಾಗೃತಿ ಜಾಥಾಕ್ಕೆ ಚಾಲನೆ
ಕನ್ನಡಪ್ರ ವಾರ್ತೆ, ರಾಯಚೂರು, ಏ.10
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಗಾಗಿ ನಗರದ ಬಾಲಿಕಾ ಸಂಘಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಮತದಾನ ಮಾಡುವಂತೆ ಅರಿವು ಮೂಡಿಸುವ ಬೃಹತ್ ಜಾಗೃತಿ ಜಾಥಾಕ್ಕೆ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಮತದಾನ ನಿಮ್ಮ ಹಕ್ಕು ಅದನ್ನು ಮುಕ್ತವಾಗಿ ಚಲಾಯಿಸಬೇಕು. ಕೇಬಲ್ ಟೀವಿ, ಚಲನಚಿತ್ರ ಮಂದಿರಗಳ ಮೂಲಕ ಜಾಗೃತಿ ಜಾಹೀರಾತು, ಬ್ಯಾನರ್, ಪೋಸ್ಟರ್ ಅಳವಡಿಕೆ, ಕರಪತ್ರ ವಿತರಣೆ, ಮಹಿಳಾ ಸಂಘಗಳು, ನೋಂದಾಯಿತ ಯುವಕ-ಯುವತಿ ಮಂಡಳಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮನೆ- ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿ: ಗ್ರಾಮೀಣ ಪ್ರದೇಶದಲ್ಲಿ ಹಲವಾರು ವಿಧಾನಗಳ ಮೂಲಕ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಮತದಾರರು ಮತದಾನ ಮಾಡಿ ಶೇಕಡಾವಾರು ಮತದಾನ ಹೆಚ್ಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಶ್ರಮಿಸುತ್ತಿದೆ. ಆಯೋಗದ ಸೂಚನೆಯಂತೆ ಸಮಿತಿ ಹಾಗೂ ಜಿಲ್ಲಾಡಳಿತ ಹಲವಾರು ವಿಧಾನಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದರು.
ಸಹಾಯಕ ಆಯುಕ್ತೆ ಎನ್.ಮಂಜುಶ್ರೀ, ಜಿಪಂ ಸಿಇಒ ಟಿ.ಜ್ಞಾನಪ್ರಕಾಶ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ, ಯುನಿಸೆಫ್ ಅಧಿಕಾರಿ ರಾಘವೇಂದ್ರ ಭಟ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.