ಮಾಧ್ಯಮ ಜಾಹೀರಾತು; ಅನುಮೋದನೆ ಕಡ್ಡಾಯ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.10
ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕೆಂದು ಸಹಾಯಕ ಆಯುಕ್ತೆ ಎನ್.ಮಂಜುಶ್ರೀ ತಿಳಿಸಿದ್ದಾರೆ.
ಚುನಾವಣೆ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಈ ಸಮಿತಿ ರಚಿಸಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳು ಸುದ್ದಿರೂಪದ ಜಾಹೀರಾತುಗಳು, ಚುನಾವಣಾ ಪ್ರಚಾರ ಸಾಮಗ್ರಿಗಳ ಬಗ್ಗೆ ನಿಗಾ ವಹಿಸಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಸಮಿತಿಯ ಅನುಮೋದನೆ ಕಡ್ಡಾಯ: ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಅನುಮೋದನೆ ಪಡೆಯದೇ ಜಾಹೀರಾತು ಪ್ರಸಾರವಾದಲ್ಲಿ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನಹರಿಸುವುದು ಹಾಗೂ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ಕಳುಹಿಸುವುದು ಎಂದು ತಿಳಿಸಿದ್ದಾರೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲ ಜಾಹೀರಾತುಗಳನ್ನು ಸಮಿತಿಯು ಗಮನಿಸಿ ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ತೋರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಲಿದೆ. ಕರಪತ್ರ, ಭಿತ್ತಿಪತ್ರ ಹಾಗೂ ಈ ರೀತಿಯ ಇತರೆ ಚುನಾವಣಾ ಸಾಮಗ್ರಿಗಳಲ್ಲಿ ಪ್ರಕಾಶಕರ ಹಾಗೂ ಮುದ್ರಕರ ಹೆಸರು, ವಿಳಾಸ ಮುದ್ರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಘೋಷಣಾ ಪತ್ರ ಸಲ್ಲಿಸಿ: ಮುದ್ರಕರು ಹಾಗೂ ಪ್ರಕಾಶಕರು ಈ ಕುರಿತ ಘೋಷಣಾ ಪತ್ರವೊಂದನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ಚುನಾವಣಾ ಸಾಮಗ್ರಿಗಳ ಮೇಲೆ ಮುದ್ರಕರ ಹಾಗೂ ಪ್ರಕಾಶಕರ ವಿವರ ಇಲ್ಲದಿದ್ದಲ್ಲಿ ಅಂತಹುಗಳ ವಿವರಗಳನ್ನು ಚುನಾವಣಾ ಅಧಿಕಾರಿಗಳಿಗೆ ಸಮಿತಿ ಕಳುಹಿಸಿ ಕೊಡಲಿದೆ ಎಂದು ತಿಳಿಸಿದ್ದಾರೆ.
ಪ್ರಕಟಿಸಿದವರ ವಿರುದ್ಧವೂ ಕ್ರಮ: ಅಭ್ಯರ್ಥಿಯ ಗಮನಕ್ಕೆ ತಾರದೇ ಬೇರೆಯವರು ಅಭ್ಯರ್ಥಿ ಹೆಸರಿನಲ್ಲಿ ಜಾಹೀರಾತು ಹಾಗೂ ಚುನಾವಣಾ ಸಾಮಗ್ರಿ ಮುದ್ರಿಸುವಂತಿಲ್ಲ. ಇಂಥ ಪ್ರಕರಣ ಕಂಡುಬಂದಲ್ಲಿ ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ. ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹೀರಾತುಗಳ ಬಗ್ಗೆಯೂ ಸಮಿತಿ ಗಮನ ಹರಿಸಲಿದೆ ಎಂದು ತಿಳಿಸಿದ್ದಾರೆ.