ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಕ್ಷೇತರನಾಗಿ ಸ್ಪರ್ಧಿಸಲು ಗುಂಡಪ್ಪ ನಿರ್ಧಾರ

Lingaraj Badiger
Updated On : 13 Apr 2013, 10:53 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.12
ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೂ ಸೇರಿದಂತೆ ಯುವಕರು, ಮಹಿಳೆಯರ ಬೆಂಬಲದ ಹಿನ್ನೆಲೆಯಲ್ಲಿ ತಾವು ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಪಿ. ಗುಂಡಪ್ಪ ಪಾಟೀಲ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಜನತೆಗೆ ಮೂಲ ಸೌಕರ್ಯ ಸೇರಿದಂತೆ ವಿವಿಧ ಯೋಜನೆಗಳ ಲಾಭ ದೊರಕಿಸಿಕೊಡುವ ಪ್ರಯತ್ನ ಮಾಡಲಿಲ್ಲ ಎಂದು ಆರೋಪಿಸಿದರು.
ರಾಜಕೀಯ ಪಕ್ಷಗಳ ಅಸಡ್ಡೆ: ಬಡವರು ಹಾಗೂ ಕೂಲಿಕಾರ್ಮಿಕರನ್ನು ಕಡೆಗಣಿಸಿರುವ ಜನಪ್ರತಿನಿಧಿಗಳು ಕೊಳಚೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆ. ಬಡವರ ಮಕ್ಕಳ ವಿದ್ಯಾಭ್ಯಾಸ, ಪೌಷ್ಟಿಕ ಆಹಾರ ನೀಡಿಕೆ ಸೇರಿದಂತೆ ಸೌಲಭ್ಯ ಒದಗಿಸುವಿಕೆಯಲ್ಲಿ ರಾಜಕೀಯ ಪಕ್ಷಗಳು ಸಂಪೂರ್ಣ ಅಸಡ್ಡೆ ತೋರಿವೆ ಎಂದು ದೂರಿದರು.
ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ನೆಪದಲ್ಲಿ ಅನುದಾನದ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೂರದೃಷ್ಟಿಯ ಕೊರತೆಯಿಂದ ಕಾಮಗಾರಿ ಕೈಗೊಂಡಿರುವುದು ಜನತೆಗೆ ಪ್ರಯೋಜನವಾಗುತ್ತಿಲ್ಲ. ಕಳೆದ ಅನೇಕ ವರ್ಷಗಳಿಂದ ವಾಸವಾಗಿರುವ ಬಡವರಿಗೆ ನಿವೇಶನದ ಹಕ್ಕುಪತ್ರ ನೀಡುವ ಕಾರ್ಯವಾಗಿಲ್ಲ.
ಹೀಗೆ ಹತ್ತು ಹಲವು ಸಮಸ್ಯೆಗಳು ನಗರದಲ್ಲಿದ್ದರೂ ಅವುಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಳ್ಳುವತ್ತ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಸದ್ಯ ಚುನಾವಣೆ ಸಂದರ್ಭದಲ್ಲಿ ಮತ್ತೆ ಭರವಸೆಗಳನ್ನು ನೀಡಲು ಹೊರಟಿದ್ದಾರೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ತಾವು ಬಡ ಮತ್ತು ಕೂಲಿಕಾರ್ಮಿಕರು ಸೇರಿ ಸಮಾಜದ ಎಲ್ಲರ ಬೆಂಬಲದ ನಿರೀಕ್ಷೆಯೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement