ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಏ.13
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಚುನಾವಣಾ ಖರ್ಚು- ವೆಚ್ಚದ ಮೇಲೆ ಸೂಕ್ತ ನಿಗಾ ವಹಿಸಲಾಗುವುದು ಎಂದು ಸಿಂಧನೂರು, ಲಿಂಗಸ್ಗೂರು, ಮಸ್ಕಿ ಕ್ಷೇತ್ರಗಳ ಚುನಾವಣಾ ವೀಕ್ಷಕ ಶಿಯಾಶರಣ್ ತಿಳಿಸಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಆಯೋಗ ನಿಗದಿಪಡಿಸಿದಂತೆ ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾ ವೆಚ್ಚ 16 ಲಕ್ಷ ಮೀರುವಂತಿಲ್ಲ ಮತ್ತು ಸುಳ್ಳು ದಾಖಲೆ ಸಲ್ಲಿಸುವಂತಿಲ್ಲ. ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದರೆ ಮತ್ತು ಸುಳ್ಳು ದಾಖಲೆ ನೀಡಿದರೆ ಅಂತಹ ಅಭ್ಯರ್ಥಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಂದರು.
ಖರ್ಚು- ವೆಚ್ಚದ ವಿವರ ದಾಖಲು: ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ವಿಡಿಯೋ, ಪ್ಲಾಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ಸ್ ಸರ್ವಲೆನ್ಸ್ ಸೇರಿದಂತೆ ಮೂರು ತಂಡಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಪ್ರತಿ ಕ್ಷೇತ್ರಕ್ಕೆ ಖರ್ಚು- ವೆಚ್ಚಕ್ಕಾಗಿ ಸಹಾಯಕ ಅಧಿಕಾರಿಯಿಂದ ದಿನವಹಿ ದಾಖಲೆ ಇಡಬೇಕು. ವೆಚ್ಚದ ವಿವರಗಳನ್ನು ಮೂರು ರಿಜಿಸ್ಟರ್ಗಳಲ್ಲಿ ದಾಖಲಿಸತಕ್ಕದ್ದು. ಪ್ರತಿದಿನ ಕ್ಯಾಷ್ ಮುಖಾಂತರ ಖರ್ಚಿನ ವಿವರ, ಬ್ಯಾಂಕ್ ಮೂಲಕ ಖರ್ಚಿನ ವಿವರದ ಕುರಿತು ಪ್ರಚಾರದ ಅವಧಿಯಲ್ಲಿ ಕನಿಷ್ಠ ಮೂರು ಬಾರಿ ಚುನಾವಣಾಧಿಕಾರಿಗೆ ಸಲ್ಲಿಸಬೇಕು ಮತ್ತು ಚುನಾವಣಾ ವೆಚ್ಚದ ಸಂಪೂರ್ಣ ವಿವರವನ್ನು ಜೂ. 8ರೊಳಗೆ ಸಲ್ಲಿಸಬೇಕೆಂದು ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ: ಚುನಾವಣೆ ಸಂದರ್ಭದಲ್ಲಿ ಹಣ ಹಾಗೂ ಇತರೆ ವಸ್ತುಗಳ ಹಂಚುವಿಕೆ ಕಂಡು ಬಂದರೆ ಅಂತಹ ಅಭ್ಯರ್ಥಿಗಳ ಪ್ರಕರಣ ದಾಖಲಿಸಲಾಗುತ್ತದೆ. ಅಕ್ರಮವಾಗಿ ಸಾಗಾಣಿಕೆ ಮಾಡುವ ಹಣ ಜಪ್ತಿ ಮಾಡಿದರೆ, ಅದು ಅಭ್ಯರ್ಥಿಗೆ ಸೇರಿದ್ದರೆ ಅದನ್ನು ಚುನಾವಣಾ ಖರ್ಚು ವೆಚ್ಚದ ದಾಖಲೆಗಳಲ್ಲಿ ನಮೂದಿಸಿ ಅವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಒಂದು ವೇಳೆ ಬೇನಾಮಿಯಾಗಿದ್ದರೆ ಅಂತಹ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹಣದ ಮೂಲಕ್ಕಾಗಿ ಆದಾಯ ತೆರಿಗೆ ಅಧಿಕಾರಗಳೊಂದಿಗೆ ವಿವರ ಪಡೆಯಲಾಗುವುದೆಂದು ವಿವರಿಸಿದರು.
ಚುನಾವಣೆ ಅಕ್ರಮಗಳ ಬಗ್ಗೆ ಅಥವಾ ನೀತಿ ಸಂಹಿತೆ ಉಲ್ಲಂಘನೆಯಾದ ಕುರಿತು ಸಾರ್ವವಜನಿಕರು ಜಿಲ್ಲಾ ಚುನಾವಣಾಧಿಕಾರಿಗಳ ದೂ. 08532-226363, 235001 ಸಂಖ್ಯೆಗಳಿಗೆ ಸಂಪರ್ಕಿಸಿ ದೂರು ದಾಖಲಿಸಿದರೆ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ವೀಕ್ಷಕ ಶಿಯಾಶರಣ ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಸ್ಗೂರು ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ.ಯೋಗೇಶ, ಮಸ್ಕಿ ಚುನಾವಣಾಧಿಕಾರಿ ಬಿ.ವೈ. ಶ್ರೀನಿವಾಸ, ನೋಡಲ್ ಅಧಿಕಾರಿ ರುದ್ರೇಶ, ಪ್ರೊಬೇಷನರಿ ಸಹಾಯಕ ಆಯುಕ್ತೆ ಆರತಿ, ತಹಸೀಲ್ದಾರ್ ಎಂ.ಎನ್. ಪಾಟೀಲ್ ಇದ್ದರು.