ಬಿಎಸ್‌ವೈ ಜಾತ್ಯತೀತ ರಾಜಕಾರಣಿ: ಖುರೇಶಿ
ಸಿಂಧನೂರು: ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಆದರೆ ಅದರಲ್ಲಿ 40 ವರ್ಷ ಕೆಲಸ ಮಾಡಿದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ಯತೀತ ರಾಜಕಾರಣಿಯಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದ ರಾಜಕಾರಣಿ ಎಂದು ಕೆಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಮುಖಂಡ ಹಾಗೂ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಖುಸ್ರೋ ಖುರೇಶಿ ಹೇಳಿದರು.
ಅವರು ಶುಕ್ರವಾರ ಕೆಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ತಾವು ಬಿಜೆಪಿ ಪ್ರಾಥಮಿಕ ಸದಸ್ಯತ್ವವವನ್ನು ಹೊಂದಿರಲಿಲ್ಲ. ಆದರೂ ಯಡಿಯೂರಪ್ಪ ತಮ್ಮ ಮೇಲೆ ವಿಶ್ವಾಸವಿಟ್ಟು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.
ಅಭಿವೃದ್ಧಿ: ಶಿಕಾರಿಪುರದಲ್ಲಿ 22 ವರ್ಷಗಳಿಂದ ಅರಬ್ಬಿ ಮದರಸಾ ಶಾಲೆ ನಡೆಯುತ್ತಿದ್ದು, ಅದಕ್ಕೆ ಅವರು ಎಲ್ಲ ರೀತಿಯ ನೆರವು ನೀಡಿದ್ದಾರೆ. ಹಜ್ ಭವನದ ನಿರ್ಮಾಣಕ್ಕೆ 5 ಎಕರೆ ಜಮೀನು, ರು. 40 ಕೋಟಿ ಹಣ ಬಿಡುಗಡೆ ಮಾಡಿದರು. ಆರು ಬಜೆಟ್‌ಗಳನ್ನು ಮಂಡಿಸಿದ ಯಡಿಯೂರಪ್ಪ ಅಲ್ಪಸಂಖ್ಯಾತರ ಹಿತರಕ್ಷಣೆಗೆ ರು. 415 ಕೋಟಿ, ರು. ಒಂದು ಸಾವಿರ ಕೋಟಿ, ರು. ಎರಡು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. 60 ವರ್ಷಗಳ ಕಾಲ ಜಾತ್ಯಾತೀತ ಪಕ್ಷಗಳೆಂದು ಹೇಳಿಕೊಳ್ಳುವ ಪಕ್ಷಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ಆದರೆ ಯಡಿಯೂರಪ್ಪ ತಮ್ಮ ಮೂರೂವರೆ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಅಲ್ಪಸಂಖ್ಯಾತರ ಪರವಾಗಿ ಮಾಡಿದ್ದಾರೆ ಎಂದರು.
ಕೆಜೆಪಿಗೆ ಕಾರ್ಯಕರ್ತರು: ರಾಜ್ಯದ 27 ಜಿಲ್ಲೆಗಳಲ್ಲಿ ತಾವು ಪ್ರವಾಸ ಮಾಡಿ ಬಂದಿದ್ದು ಎಲ್ಲಾ ಕಡೆ ಕೆಜೆಪಿಗೆ ಕಾರ್ಯಕರ್ತರು ಸುನಾಮಿಯಂತೆ ಹರಿದು ಬರುತ್ತಿದ್ದಾರೆ. ಈ ಬಾರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಕೆಜೆಪಿ ಅಧಿಕಾರಕ್ಕೆ ಬರುತ್ತದೆ. ಅವರು ವಿಧಾನ ಸಭೆಯ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸುತ್ತಾರೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳು ಸ್ವಾಗತಾರ್ಹವಾಗಿದ್ದು, ಹಣ ಹಾಗೂ ಹೆಂಡದ ಬಲದಿಂದ ಅಧಿಕಾರದ ಕನಸು ಕಾಣುವ ಪಕ್ಷಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ ಎಂದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಮಸೀದಿ ಹಾಗೂ ಚರ್ಚ್‌ಗಳ ಮೇಲೆ ವಿನಾ ಕಾರಣ ದೌರ್ಜನ್ಯಗಳು, ಹಲ್ಲೆಗಳು ನಡೆಯುತ್ತಿರುವುದರ ಹಿಂದೆ ಸೋಗಲಾಡಿ ಜಾತ್ಯಾತೀತ ಪಕ್ಷಗಳ ಕೈವಾಡವಿರುವುದು ಎಲ್ಲರಿಗೂ ತಿಳಿದ ವಿಷಯ. ಕೆಜೆಪಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪೂರ, ಮುಖಂಡರಾದ ಸಿ.ಟಿ.ಪಾಟೀಲ್, ಅನ್ವರ ಪಾಷಾ, ನಗರಸಭೆ ಸದಸ್ಯ ಹಾಜಿಮಸ್ತಾನ್, ಮಾಜಿ ಸದಸ್ಯ ಎಂ.ಡಿ. ನದೀಮ್ಮುಲ್ಲಾ, ಶೇಖರಪ್ಪ ಹೂಗಾರ ವಕೀಲರು, ಗುಮಾಸ್ತರ ಸಂಘದ ಅಧ್ಯಕ್ಷ ಕಲ್ಲಪ್ಪ ಬದಾಮಿ ಮತ್ತಿತರರು ಉಪಸ್ಥಿತರಿದ್ದರು.